ಕಾಪು ತಾಲೂಕು ಪಂಚಾಯತ್ ಕಚೇರಿ ಉದ್ಘಾಟನೆ

Update: 2020-09-18 12:52 GMT

ಪಡುಬಿದ್ರಿ: ಹಲವು ವರ್ಷಗಳ ಕನಸಾಗಿರುವ ಕಾಪುವಿನ ಅಭಿವೃದ್ಧಿಗೆ ಹಂತ ಹಂತವಾಗಿ ಮುಂದಡಿಯಿಡಲಾಗುವುದು. ಬಂಗ್ಲೆ ಮೈದಾನದ ಬಳಿ 10 ಕೋಟಿ ರೂ. ವೆಚ್ಚದ ಮಿನಿ ವಿಧಾನ ಸೌಧ ನಿರ್ಮಾಣಕ್ಕೆ 3 ಕೋಟಿ ರೂ. ಬಿಡುಗಡೆಯಾಗಿದೆ. ಅಕ್ಟೋಬರ್ ಎರಡನೇ ವಾರದಲ್ಲಿ ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದರು.

ನೂತನವಾಗಿ ರಚನೆಗೊಂಡ ಕಾಪು ತಾಲ್ಲೂಕು ಪಂಚಾಯತ್‍ನ ನೂತನ ಆಡಳಿತ ಕಚೇರಿಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ಎಲ್ಲೂರಿನಲ್ಲಿ ಕಸ ವಿಲೇವಾರಿ ಘಟಕದ ನಿರ್ಮಾಣ ಕಾಮಗಾರಿ ಪ್ರಗತಿಯಲಿದೆ. 54 ಕೋಟಿ ರೂ. ವೆಚ್ಚದ ಕುಡಿಯುವ ನೀರಿನ ಯೋಜನೆ, 4.50 ಕೋಟಿ ರೂ. ವೆಚ್ಚದ ಸುಸಜ್ಜಿತ ಮೀನು ಮಾರುಕಟ್ಟೆ, 10 ಕೋಟಿ ರೂ. ವೆಚ್ಚದಲ್ಲಿ ಪಡುಬಿದ್ರಿ ಬ್ಲ್ಯೂ ಫ್ಲ್ಯಾಗ್ ಬೀಚ್, 185 ಕೋಟಿ ರೂ. ವೆಚ್ಚದ ಹೆಜಮಾಡಿ ಬಂದರು ಅಭಿವೃದ್ಧಿ ಯೋಜನೆ ಕೋವಿಡ್‍ನಿಂದ ಕಾರ್ಯಗತವಾಗುವಲ್ಲಿ ವಿಳಂಬವಾಗುತ್ತಿದೆ. ಮೆಸ್ಕಾಂ ಕಚೇರಿಗೆ ಸ್ವಂತ ನಿವೇಶನ ಒದಗಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಮಾತನಾಡಿ, ಕಂದಾಯ ಇಲಾಖೆಗೆ ಸಂಬಂಧಪಟ್ಟ  ಸೇವೆಗಳಲ್ಲಿ ರಾಜ್ಯದಲ್ಲಿ ಉಡುಪಿ ಜಿಲ್ಲೆ ನಂ. 1 ಸ್ಥಾನದಲ್ಲಿದೆ. 234 ತಾಲ್ಲೂಕು ಪಂಚಾಯತ್‍ಗಳಲ್ಲಿ ಕಾಪು ತಾಲೂಕು ಮೂರನೇ ಸ್ಥಾನದಲ್ಲಿದೆ. ಟಾಪ್ 10 ತಾಲೂಕುಗಳಲ್ಲಿ ಉಡುಪಿ ಜಿಲ್ಲೆಯ ಏಳೂ ತಾಲೂಕುಗಳೂ ಮೊದಲ ಹತ್ತರೊಳಗೆ ಪ್ರತೀ ಬಾರಿಯೂ ಸ್ಥಾನ ಪಡೆಯುತ್ತಿದೆ. ಇಲ್ಲಿನ ಎಲ್ಲಾ ಅಭಿವೃದ್ಧಿ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ನಡೆಸಲಿದ್ದೇವೆ. ಕಾಪು ಪುರಸಭಾ ವ್ಯಾಪ್ತಿಯ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಇರುವ ಅಡೆ ತಡೆಯನ್ನು ಶೀಘ್ರ ನಿವಾರಿಸಿ ಕಾರ್ಯಗತ ಮಾಡಲಾಗುವುದು ಎಂದರು.

ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಸದಸ್ಯರಾದ ಶಶಿಕಾಂತ್ ಪಡುಬಿದ್ರಿ, ಗೀತಾಂಜಲಿ ಸುವರ್ಣ, ಶಿಲ್ಪಾ ಜಿ. ಸುವರ್ಣ, ತಹಶೀಲ್ದಾರ್ ಮಹಮ್ಮದ್ ಇಸಾಕ್, ಆಡಳಿತಾಧಿಕಾರಿ ಕಾರ್ಯದರ್ಶಿ ಕಿರಣ್ ಪಡ್ನೇಕರ್, ಲೆಕ್ಕಾಧಿಕಾರಿ ಕೆ.ಜಿ. ಭಟ್,  ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡ, ಉಡುಪಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸಂಧ್ಯಾ ಕಾಮತ್, ಪ್ರಭಾರ ಕಾರ್ಯ ನಿರ್ವಹಣಾಧಿಕಾರಿ ಮೋಹನ್ ರಾಜ್, ಸದಸ್ಯರಾದ ಶಶಿಪ್ರಭಾ ಶೆಟ್ಟಿ, ನೀತಾ ಗುರುರಾಜ್, ಮೈಕಲ್ ರಮೇಶ್ ಡಿಸೋಜ, ರಾಜೇಶ್ ಶೆಟ್ಟಿ, ಸುಜಾತ ಸುವರ್ಣ, ಗೀತಾ ವಾಗ್ಲೆ, ಯು.ಸಿ. ಶೇಖಬ್ಬ, ದಿನೇಶ್ ಕೋಟ್ಯಾನ್, ರಾಜೇಶ್ ಕುಮಾರ್ ಅಂಬಾಡಿ, ನಾಗೇಶ್ ಪೂಜಾರಿ, ಕೇಶವ ಮೊಯ್ಲಿ, ರೇಣುಕಾ ಪುತ್ರನ್ ಉಪಸ್ಥಿತರಿದ್ದರು. ಪ್ರಭಾರ ಕಾರ್ಯ ನಿರ್ವಹಣಾಧಿಕಾರಿ ವಿವೇಕಾನಂದ ಗಾಂವ್ಕರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪಂಚಾಯಿತಿ ಅಧಿಕಾರಿಗಳಾದ ಚಂದ್ರಶೇಖರ್ ಸಾಲ್ಯಾನ್ ಮತ್ತು ಮಮತಾ ವೈ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News