ಭಾರೀ ಆಕ್ರೋಶದ ಬಳಿಕ ನೆಹರೂ ಕುಟುಂಬದ ಕುರಿತ ಹೇಳಿಕೆಗೆ ವಿಷಾದಿಸಿದ ಅನುರಾಗ್ ಠಾಕೂರ್

Update: 2020-09-18 13:45 GMT

ಹೊಸದಿಲ್ಲಿ: ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ನೆಹರೂ-ಗಾಂಧಿ ಕುಟುಂಬದ ಬಗ್ಗೆ ನೀಡಿದ ಹೇಳಿಕೆ ಲೋಕಸಭೆಯಲ್ಲಿ ಕೋಲಾಹಲವನ್ನು ಸೃಷ್ಟಿಸಿದ್ದು, ವಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದವು.

ಪಿಎಂ ಕೇರ್ಸ್ ನಿಧಿ ಪಾರದರ್ಶಕವಾಗಿಲ್ಲ ಎಂದು ವಿಪಕ್ಷಗಳು ಆರೋಪಿಸಿದಾಗ ಕೇಂದ್ರ ಸಚಿವ ಅನುರಾಗ್ ಠಾಕೂರ್ ಪಿಎಂ ಕೇರ್ಸ್ ನಿಧಿಗೆ ಬೆಂಬಲವಾಗಿ ಮಾತನಾಡಿದರು.

“ಹೈಕೋರ್ಟ್ ನಿಂದ ಸುಪ್ರೀಂ ಕೋರ್ಟ್ ವರೆಗೆ ಎಲ್ಲರೂ ಪಿಎಂ ಕೇರ್ಸ್ ಗೆ ಮಾನ್ಯತೆ ನೀಡಿದ್ದಾರೆ. ಮಕ್ಕಳಿಂದ ಹಿಡಿದು ಎಲ್ಲರೂ ಪಿಎಂ ಕೇರ್ಸ್ ಗೆ ದೇಣಿಗೆಗಳನ್ನು ಸಲ್ಲಿಸಿದ್ದಾರೆ. ನೀವು ಪಿಎಂ ಕೇರ್ಸ್ ಬಗ್ಗೆ ಮಾತನಾಡುವುದಾದರೆ , 1948ರಲ್ಲಿ ನೆಹರೂ ಜಿ ಸ್ಥಾಪಿಸಿದ್ದ ಪಿಎಂ ನ್ಯಾಶನಲ್ ರಿಲೀಫ್ ಫಂಡ್ ಬಗ್ಗೆಯೂ ನೋಡಿ. 1948ರಿಂದ ಇಂದಿನವರೆಗೆ ಅದು ಇನ್ನೂ ನೋಂದಣಿಯಾಗಿಲ್ಲ. ಹಾಗಾದರೆ ಅದಕ್ಕೆ ವಿದೇಶಿ ದೇಣಿಗೆಯ ಕ್ಲಿಯರೆನ್ಸ್ ಸಿಗುವುದು ಹೇಗೆ?, ಪಿಎಂ ಕೇರ್ಸ್ ನೋಂದಣಿಯಾಗಿದೆ. ಇದು 130 ಕೋಟಿ ಜನರಿಗಾಗಿ ಇರುವುದು. ನೀವು ಟ್ರಸ್ಟ್ ರಚಿಸಿದ್ದು ಗಾಂಧಿ ಕುಟುಂಬಕ್ಕಾಗಿ. ನೆಹರೂ, ಸೋನಿಯಾ ಗಾಂಧಿ ಪಿಎಂ ನ್ಯಾಶನಲ್ ರಿಲೀಫ್ ಫಂಡ್ ನ ಸದಸ್ಯರಾಗಿದ್ದರು. ಈ ಬಗ್ಗೆ ತನಿಖೆಯಾಗಬೇಕು” ಎಂದರು.

ಠಾಕೂರ್ ಅವರ ಈ ಹೇಳಿಕೆ ವಿರುದ್ಧ ವಿಪಕ್ಷಗಳ ಸಂಸದರು ಭಾರೀ ಆಕ್ರೋಶ ವ್ಯಕ್ತಪಡಿಸಿದರು.

“ಈ ಹಿಮಾಚಲದ ಹುಡುಗ ಯಾರು?, ಈ ಚರ್ಚೆಯಲ್ಲಿ ನೆಹರೂ ಬಂದದ್ದು ಹೇಗೆ?, ನಾವು ಪ್ರಧಾನಿ ಮೋದಿಯವರ ಹೆಸರನ್ನು ಹೇಳಿದ್ದೇವೆಯೇ?” ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಆಕ್ರೋಶ ವ್ಯಕ್ತಪಡಿಸಿದರು.

ಅನುರಾಗ್ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕರು, ‘ಗೋಲಿ ಮಾರೋ ಮಂತ್ರಿ ರಾಜೀನಾಮೆ ನೀಡಲಿ” ಎಂದು ಘೋಷಣೆಗಳನ್ನು ಕೂಗಿದರು.

ಇದಾಗಿ ಕಲಾಪ ಮುಂದೂಡಲಾಯಿತು. ನಂತರ 6 ಗಂಟೆಗೆ ಮತ್ತೆ ಕಲಾಪ ಆರಂಭವಾದಾಗ ಮಾತನಾಡಿದ ಅನುರಾಗ್ ಠಾಕೂರ್, ಯಾರಿಗೂ ನೋವುಂಟು ಮಾಡುವ ಉದ್ದೇಶ ಇರಲಿಲ್ಲ. “ನಾನು ಯಾರಿಗಾದರೂ ನೋವುಂಟು ಮಾಡಿದ್ದರೆ ವಿಷಾದಿಸುತ್ತೇನೆ” ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News