ಪಡುಬಿದ್ರಿ ಬೀಚ್‌ಗೆ ಶೀಘ್ರದಲ್ಲಿ ಬ್ಲೂ ಫ್ಲ್ಯಾಗ್ ಮಾನ್ಯತೆ : ಜಿಲ್ಲಾಧಿಕಾರಿ ಜಿ.ಜಗದೀಶ್ ವಿಶ್ವಾಸ

Update: 2020-09-18 15:07 GMT

ಪಡುಬಿದ್ರೆ : ಜಿಲ್ಲೆಯ ಪಡುಬಿದ್ರೆ ಬೀಚ್‌ಗೆ ಅಂತಾರಾಷ್ಟ್ರೀಯ ಬ್ಲೂ ಫ್ಲ್ಯಾಗ್ ಮಾನ್ಯತೆ ದೊರೆಯಲು ಇನ್ನು ಒಂದು ಹೆಜ್ಜೆ ಮಾತ್ರ ಇದ್ದು, ಶೀಘ್ರದಲ್ಲಿ ಪಡುಬಿದ್ರೆ ಬೀಚ್‌ಗೆ ಬ್ಲೂ ಫ್ಲ್ಯಾಗ್ ಸರ್ಟಿಫಿಕೇಶನ್ ದೊರೆಯಲಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಪಡುಬಿದ್ರೆಯ ಬ್ಲೂ ಫ್ಲ್ಯಾಗ್ ಬೀಚ್‌ನಲ್ಲಿ ಕೇಂದ್ರ ಸರಕಾರದ ಸ್ವಚ್ಛತಾ ಅಭಿಯಾನದ ಮುಂದುವರಿದ ಭಾಗವಾಗಿ ನಡೆದ ‘ಐ ಆ್ಯಮ್ ಸೇವಿಂಗ್ ಮೈ ಬೀಚ್’ ಧ್ವಜಾರೋಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲಾಡಳಿತ, ಜಿಲ್ಲಾ ಪ್ರವಾಸೋದ್ಯಮ ಇಲಾಖೆ, ಬ್ಲೂ ಫ್ಲ್ಯಾಗ್ ಬೀಚ್‌ಗಳ ಸಹಕಾರದೊಂದಿಗೆ ಕೇಂದ್ರ ಅರಣ್ಯ, ಪರಿಸರ ಇಲಾಖೆ ಈ ಕಾರ್ಯಕ್ರಮ ಆಯೋಜಿಸಿತ್ತು.

ದೇಶದ 13 ಬೀಚ್‌ಗಳನ್ನು ಅಂತಾರಾಷ್ಟ್ರೀಯ ಬ್ಲೂ ಫ್ಲ್ಯಾಗ್ ಮಾನ್ಯತೆಗೆ ಅಭಿವೃದ್ಧಿಪಡಿಸಿದ್ದು, ಇವುಗಳಲ್ಲಿ ಎಲ್ಲಾ ಅಗತ್ಯ ನಿಯಮಗಳ ಪಾಲನೆ ಮತ್ತು ಗುಣಮಟ್ಟ ಹೊಂದಿರುವ 8 ಬೀಚ್‌ಗಳನ್ನು ರಾಷ್ಟ್ರೀಯ ಆಯ್ಕೆ ಸಮಿತಿ ಆಯ್ಕೆ ಮಾಡಿ ಅಂತಾರಾಷ್ಟ್ರೀಯ ಜ್ಯೂರಿಗೆ ಕಳುಹಿಸಿದ್ದು, ಅದರಲ್ಲಿ ನಮ್ಮ ಹೆಮ್ಮೆಯ ಪಡುಬಿದ್ರೆ ಬ್ಲೂ ಫ್ಲ್ಯಾಗ್ ಬೀಚ್ ಸಹ ಸೇರಿದೆ ಎಂದವರು ವಿವರಿಸಿದರು.

ಈ ಬೀಚ್‌ಗಳಿಗೆ ಸದ್ಯದಲ್ಲಿಯೇ ಇಂಟರ್‌ ನ್ಯಾಷನಲ್ ಜ್ಯೂರಿ ತಂಡ ಪರಿಶೀಲನೆಗೆ ಆಗಮಿಸಲಿದೆ. ಈ ಮಾನ್ಯತೆಗೆ ಬೇಕಾದ ಎಲ್ಲಾ ಅರ್ಹತೆ ಗಳನ್ನು ಪಡುಬಿದ್ರೆ ಬೀಚ್ ಹೊಂದಿದ್ದು, ಹೀಗಾಗಿ ಇದಕ್ಕೆ ಬ್ಲೂ ಫ್ಲ್ಯಾಗ್ ಬೀಚ್ ಸರ್ಟಿಫಿಕೇಶನ್‌ನ ದೊರೆಯುವ ವಿಶ್ವಾಸ ಇದೆ ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ನುಡಿದರು.

ಸ್ವಚ್ಚತೆ, ಸುರಕ್ಷತೆ, ಪರಿಸರ ರಕ್ಷಣೆ, ನೀರಿನ ಗುಣಮಟ್ಟ ಮುಂತಾದ ಷರತ್ತು ಗಳಿಗೊಳಪಟ್ಟು ಬ್ಲೂ ಫ್ಲ್ಯಾಗ್ ಮಾನ್ಯತೆ ದೊರೆಯಲಿದೆ. ಪಡುಬಿದ್ರೆಯ ಬೀಚ್‌ನ್ನು ಈ ಎಲ್ಲಾ ಷರತ್ತುಗಳ ಆಧಾರದಲ್ಲಿ ಅಭಿವೃಧ್ದಿಪಡಿಸಲಾಗಿದೆ. ಇಲ್ಲಿನ ಸಮುದ್ರ ನೀರಿನ ಗುಣಮಟ್ಟ ಅತ್ಯಂತ ಶುದ್ಧ  ಎಂಬ ವರದಿ ಬಂದಿದೆ. ಈ ಪ್ರದೇಶವನ್ನೂ ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃಧಿಗೊಳಿಸಲು ರಾಜ್ಯ ಸರಕಾರಕ್ಕೆ 5 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿದೆ. ಬೀಚ್ ಅಭಿವೃದ್ಧಿಯಿಂದ ಸ್ಥಳೀಯರು ಆತಂಕ ಪಡುವ ಅಗತ್ಯವಿಲ್ಲ. ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಜೊತೆಗೆ ಹೆಚ್ಚಿನ ಉದ್ಯೋಗವಕಾಶ ಸೃಷ್ಟಿಯಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

‘ಐ ಆ್ಯಮ್ ಸೇವಿಂಗ್ ಮೈ ಬೀಚ್’ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಬ್ಲೂ ಫ್ಲ್ಯಾಗ್ ಮಾನ್ಯತೆ ಹೊಂದುವ ಹಾದಿಯಲ್ಲಿರುವ ಬೀಚ್ ಇದಾಗಿದ್ದು, ಪ್ರಧಾನಿ ಯವರ ಸ್ವಚ್ಛ ಭಾರತ ಕಲ್ಪನೆಯಡಿಯಲ್ಲಿ ಬೀಚ್ ಅಭಿವೃದ್ಧಿಯಾಗುತ್ತಿದೆ. ಕೇಂದ್ರ ಸರಕಾರ ಎಂಟು ಕೋಟಿ ರೂ.ಗಳ ವೆಚ್ಚದಲ್ಲಿ ಯೋಜನೆಯನ್ನು ಅನುಷ್ಠಾನ ಗೊಳಿಸುತ್ತಿದೆ. ಸ್ಥಳೀಯರಿಗೆ ಯಾವುದೇ ತೊಂದರೆಯಾಗದಂತೆ, ಪರಿಸರ ರಕ್ಷಣೆಯೊಂದಿಗೆ ಇಲ್ಲಿ ಪ್ರವಾಸೋದ್ಯಮವನ್ನು ಅಭಿವೃಧ್ದಿಪಡಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಜಿಪಂ ಸದಸ್ಯ ಶಶಿಕಾಂತ ಪಡುಬಿದ್ರೆ, ತಾಪಂ ಸದಸ್ಯೆ ನೀತಾ ಗುರುರಾಜ್, ಕಾಪು ತಹಶೀಲ್ದಾರ್ ಮುಹಮದ್ ಇಸಾಕ್, ಎಸಿಟಿಯ ಮನೋಹರ ಶೆಟ್ಟಿ ಮತ್ತಿತ ರರು ಉಪಸ್ಥಿತರಿದ್ದರು.

ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ನಾಯಕ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರೆ, ಬ್ಲೂ ಫ್ಲ್ಯಾಗ್ ಬೀಚ್‌ನ ಪ್ರಬಂಧಕ ವಿಜಯ್ ಶೆಟ್ಟಿ ವಂದಿಸಿದರು.

ದ್ವೀಪ ಅಭಿವೃದ್ಧಿಗೆ ಪ್ರಸ್ತಾವನೆ

ಪಡುಬಿದ್ರಿ ಎಂಡ್ ಪಾಯಂಟ್‌ನಲ್ಲಿ ಬ್ಲೂ ಫ್ಲ್ಯಾಗ್ ಬೀಚ್ ಪ್ರದೇಶದ ಸಮೀಪವೇ ಸುಮಾರು ಎರಡು ಎಕ್ರೆ ಪ್ರದೇಶಗಳ ದ್ವೀಪವಿದೆ. ಅದರ ಸಮಗ್ರ ಅಭಿವೃದ್ಧಿಗೂ ಯೋಜನೆ ರೂಪಿಸಲಾಗುವುದು. ಈ ಬಗ್ಗೆ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ನುಡಿದರು.

ಅಂತಾರಾಷ್ಟ್ರೀಯ ಸ್ವಚ್ಛತಾ ದಿನದಂದು ಸುಸ್ಥಿರ ಅಭಿವೃದ್ಧಿಗಾಗಿ ಎಂಇಎಫ್‌ಸಿ, ಎಸ್‌ಇಸಿಓಎಮ್ ಮತ್ತು ಜಿಲ್ಲಾಡಳಿತ ದೇಶದ 8 ಕಡಲ ತೀರದಲ್ಲಿ ಐ ಆ್ಯಮ್ ಸೇವಿಂಗ್ ಮೈ ಬೀಚ್ ಎಂಬ ಧ್ಯೇಯದೊಂದಿಗೆ ದೇಶದ ವಿವಿಧ ಬೀಚ್‌ಗಳಲ್ಲಿ ಏಕಕಾಲದಲ್ಲಿ ವೆಬ್‌ನಾರ್ ಮೂಲಕ ಧ್ವಜಾರೋಹಣ ಕಾರ್ಯುಕ್ರಮ ನಡೆಯಿತು. ರಾಜ್ಯದಲ್ಲಿ ಹೊನ್ನಾವರದ ಕಾಸರಕೋಡು ಇಕೋ ಬೀಚ್ ಹಾಗೂ ಪಡುಬಿದ್ರಿಯ ಬ್ಲೂ ಫ್ಲ್ಯಾಗ್ ಬೀಚ್‌ನಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News