ದ.ಕ.ಜಿಲ್ಲೆ : ಮುಷ್ಕರ ಕೈ ಬಿಟ್ಟ ಸರಕಾರಿ ವೈದ್ಯರು

Update: 2020-09-18 15:28 GMT

ಮಂಗಳೂರು, ಸೆ.18: ವೇತನ ಏರಿಕೆ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ವೈದ್ಯಾಧಿಕಾರಿಗಳ ಸಂಘವು ‘ವರದಿ ತಡೆ ಹಿಡಿಯುವ’ ಮೂಲಕ ಕಳೆದ ನಾಲ್ಕು ದಿನದಿಂದ ನಡೆಯುತ್ತಿದ್ದ ಪ್ರತಿಭಟನೆಯನ್ನು ಶುಕ್ರವಾರ ಕೈ ಬಿಡಲಾಗಿದೆ.

ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಶುಕ್ರವಾರ ಮುಷ್ಕರ ವನ್ನು ಹಿಂತೆಗೆದುಕೊಳ್ಳಲಾಗಿದೆ. ಅದರಂತೆ ಮಧ್ಯಾಹ್ನದಿಂದಲೇ ದ.ಕ. ಜಿಲ್ಲಾ ಶಾಖೆಯು ಎಲ್ಲಾ ವರದಿಗಳನ್ನು ಸರಕಾರಕ್ಕೆ ಸಲ್ಲಿಸುವ ಕೆಲಸವನ್ನು ಆರಂಭಿಸಿತು.

ಸರಕಾರಿ ವೈದ್ಯಾಧಿಕಾರಿಗಳ ವೇತನ ಪರಿಷ್ಕರಣೆ ಸಹಿತ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಸಂಘದ ಎಲ್ಲಾ ವೈದ್ಯರು ಕಳೆದ ನಾಲ್ಕು ದಿನಗಳಿಂದ ತಾವು ಪರೀಕ್ಷಿಸಿದ ವರದಿಗಳನ್ನು ಸರಕಾರಕ್ಕೆ ಸಲ್ಲಿಸದೆ ತಡೆಹಿಡಿಯುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದ್ದರು.

ಸರಕಾರಕ್ಕೆ ಸಲ್ಲಿಸಬೇಕಾದ ವರದಿಗಳನ್ನು ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡದೆ ತಡೆ ಹಿಡಿಯಲಾಗಿತ್ತೇ ವಿನಃ ವರದಿಗಳನ್ನು ರೋಗಿಗಳಿಗೆ ನೀಡುವಲ್ಲಿ ಯಾವುದೇ ಸಮಸ್ಯೆ ಉಂಟು ಮಾಡಲಿಲ್ಲ. ಇದೀಗ ಶುಕ್ರವಾರ ಸಚಿವರು ವೈದ್ಯಾಧಿಕಾರಿಗಳ ಸಭೆ ಕರೆದು ಬೇಡಿಕೆ ಈಡೇರಿಸುವ ಭರವಸೆ ನೀಡಿರುವುದರಿಂದ ಪ್ರತಿಭಟನೆ ಹಿಂತೆಗೆದುಕೊಳ್ಳಲಾಗಿದೆ. ಜಿಲ್ಲಾ ಸಂಘದ ಎಲ್ಲಾ ವೈದ್ಯರು ಮಧ್ಯಾಹ್ನದಿಂದಲೇ ವರದಿಗಳನ್ನು ಸರಕಾರಕ್ಕೆ ಸಲ್ಲಿಸುತ್ತಿದ್ದಾರೆ ಎಂದು ಸಂಘದ ಅಧ್ಯಕ್ಷ ಡಾ. ನವೀನ್ ಚಂದ್ರ ಕುಲಾಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News