×
Ad

ಕೊರೋನ ಹೀರೋಗಳನ್ನು ಯಾಕೆ ಅವಮಾನಿಸುತ್ತೀರಿ ?: ಕೇಂದ್ರಕ್ಕೆ ರಾಹುಲ್ ಗಾಂಧಿ ಪ್ರಶ್ನೆ

Update: 2020-09-18 21:02 IST

 ಹೊಸದಿಲ್ಲಿ, ಸೆ. 18: ಕೊರೋನ ಸೋಂಕಿಗೆ ಒಳಗಾದ ಹಾಗೂ ಮೃತಪಟ್ಟ ಆರೋಗ್ಯ ಸೇವೆ ಸಿಬ್ಬಂದಿಯ ಮಾಹಿತಿಯನ್ನು ಕೇಂದ್ರದ ಮಟ್ಟದಲ್ಲಿ ನಿರ್ವಹಿಸಿಲ್ಲ ಎಂದು ಹೇಳಿರುವ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ.

ಕೊರೋನ ಹೀರೋಗಳ ಮಾಹಿತಿ ನಿರ್ವಹಿಸದೆ ಕೇಂದ್ರ ಸರಕಾರ ಕೊರೋನ ಹೀರೋಗಳಿಗೆ ಅವಮಾನ ಮಾಡಿದೆ ಎಂದು ಅವರು ಹೇಳಿದ್ದಾರೆ.

ಆರೋಗ್ಯ ರಾಜ್ಯಕ್ಕೆ ಸಂಬಂಧಿಸಿದ ವಿಷಯ ಹಾಗೂ ಅಂತಹ ಮಾಹಿತಿಯನ್ನು ಕೇಂದ್ರ ಮಟ್ಟದಲ್ಲಿ ಆರೋಗ್ಯ ಸಚಿವಾಲಯ ನಿರ್ವಹಿಸಿಲ್ಲ ಎಂದು ಕೇಂದ್ರ ಆರೋಗ್ಯ ಖಾತೆಯ ಸಹಾಯಕ ಸಚಿವ ಅಶ್ವಿನಿ ಚೌಭೆ ಈ ವಾರ ರಾಜ್ಯ ಸಭೆಗೆ ಮಾಹಿತಿ ನೀಡಿದ್ದರು.

 ಕೊರೋನದಿಂದ ಸೋಂಕಿಗೆ ಒಳಗಾದ ಹಾಗೂ ಮೃತಪಟ್ಟ ವೈದ್ಯರು, ದಾದಿಗಳು, ಬೆಂಬಲಿತ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಸೇರಿದಂತೆ ಆರೋಗ್ಯ ಸೇವೆ ಸಿಬ್ಬಂದಿ ಸಂಖ್ಯೆಯ ಕುರಿತ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದ್ದರು.

ಚೌಬೆ ಅವರು ಪ್ರತಿಕ್ರಿಯಿಸಿದ ಕುರಿತ ವರದಿಯನ್ನು ರಾಹುಲ್ ಗಾಂಧಿ, ‘ಪ್ರತಿಕೂಲ ದತ್ತಾಂಶ ಮುಕ್ತ ಮೋದಿ ಸರಕಾರ’ ಎಂದು ಶೀರ್ಷಿಕೆಯ ತನ್ನ ಟ್ವೀಟ್‌ನೊಂದಿಗೆ ಟ್ಯಾಗ್ ಮಾಡಿದ್ದಾರೆ.

 ‘‘ತಟ್ಟೆಗಳನ್ನು ಹೊಡೆಯುವುದು ಅಥವಾ ದೀಪಗಳನ್ನು ಹಚ್ಚುವುದಕ್ಕಿಂತ ಆರೋಗ್ಯ ಸೇವೆಯ ಕಾರ್ಯಕರ್ತರ ಸುರಕ್ಷೆ ಹಾಗೂ ಅವರಿಗೆ ಗೌರವ ನೀಡುವುದು ಅತಿ ಮುಖ್ಯ’’ ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಕೊರೋನ ಹೀರೋಗಳಿಗೆ ಮೋದಿ ಸರಕಾರ ಯಾಕೆ ಹೀಗೆ ಅವಮಾನ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News