ಉಡುಪಿ: ಆನ್‌ಲೈನ್ ನಲ್ಲಿ ಪರಿಚಯವಾದ ಯುವತಿಯಿಂದ ಸಾವಿರಾರು ರೂ. ಕಳೆದುಕೊಂಡ ಯುವಕ

Update: 2020-09-18 16:11 GMT

ಉಡುಪಿ, ಸೆ.18: ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯ ವಾದ ಅಪರಿಚಿತ ಯುವತಿಯ ಬಣ್ಣದ ಮಾತುಗಳಿಗೆ ಮಾರುಹೋದ ಯುವಕನೊಬ್ಬ ಸಾವಿರಾರು ರೂ.ಗಳನ್ನು ಕಳೆದುಕೊಂಡು ಇದೀಗ ಪರಿತಪಿಸುತ್ತಿರುವ ಘಟನೆ ವರದಿಯಾಗಿದೆ.

ನಾಗೂರು ನಿವಾಸಿ ನಾಗರಾಜ ಪೂಜಾರಿ ಎಂಬವರೇ ಹೀಗೆ 58,800ರೂ. ಗಳನ್ನು ಕಳೆದುಕೊಂಡವರು. ಸುಮಾರು 15-20 ದಿನಗಳ ಹಿಂದೆ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಬೆರ್ನಿಟ್ ವಿನ್ಸೆಂಟ್ ಎಂಬಾಕೆ ನಾಗರಾಜ ಪೂಜಾರಿ ಅವರನ್ನು ಪರಿಚಯ ಮಾಡಿಕೊಂಡಿದ್ದಳು. ತಾನು ಲಂಡನ್‌ನಲ್ಲಿ ಡಬ್ಲ್ಯುಎಚ್‌ಒ ಸಂಸ್ಥೆಯ ಉದ್ಯೋಗಿಯಾಗಿರುವುದಾಗಿ ಆಕೆ, ನಾಗರಾಜ ಅವರನ್ನು ನಂಬಿಸಿದ್ದಳು. ವಾಟ್ಸ್ಆ್ಯಪ್ ಚಾಟಿಂಗ್ ವೇಳೆ ತಾನು ಸೆ.14ರಂದು ಭಾರತಕ್ಕೆ ಬರುತ್ತಿರುವುದಾಗಿಯೂ, ತನ್ನಲ್ಲಿರುವ ಹಣವನ್ನು ಭಾರತದಲ್ಲಿ ಹೂಡಿಕೆ ಮಾಡುತ್ತಿರುವುದಾಗಿಯೂ ಆಕೆ ನಂಬಿಸಿದ್ದಳು. 

ಸೆ.15ರಂದು ಪ್ರಕರಣದ ಎರಡನೇ ಆರೋಪಿಯಾಗಿರುವ ಅಪರಿಚಿತ ವ್ಯಕ್ತಿಯೋರ್ವ ಕರೆ ಮಾಡಿ ತಾನು ಹೊಸದಿಲ್ಲಿಯ ಏರ್ ಪೋರ್ಟ್ ಅಧಿಕಾರಿ. ನಿಮ್ಮ ಸ್ನೇಹಿತೆ (ಆರೋಪಿ 1) ಹೊಸದಿಲ್ಲಿ ಏರ್ ಪೋರ್ಟ್ ಗೆ ಬಂದಿದ್ದು, ಅವರಲ್ಲಿರುವ ಡಿಡಿಯ ರಿಜಿಸ್ಟ್ರೇಶನ್ ಬಾಬ್ತು 58,800 ರೂ. ಕೂಡಲೇ ಜಮೆ ಮಾಡುವಂತೆ ತಿಳಿಸಿದ್ದ. ಇದನ್ನು ನಂಬಿದ್ದ ನಾಗೇಶ್ ಪೂಜಾರಿ ಆನ್‌ಲೈನ್ ಮೂಲಕ ಕಿರಿಮಂಜೇಶ್ವರದ ತನ್ನ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಮಾಡಿದ್ದರು.

ಇದಾದ ಬಳಿಕ ಮತ್ತೊಮ್ಮೆ ಆತ ಕರೆ ಮಾಡಿ ಕೋವಿಡ್ ಪರೀಕ್ಷೆಗೆ 45,500 ರೂ. ಹಣ ನೀಡುವಂತೆ ತಿಳಿಸಿದ್ದ. ಈ ವೇಳೆ ಎಚ್ಚೆತ್ತುಕೊಂಡ ನಾಗೇಶ್ ಪೂಜಾರಿ ಇದೊಂದು ಮೋಸದ ಜಾಲ ಎನ್ನುವುದನ್ನು ಮನವರಿಕೆ ಮಾಡಿಕೊಂಡರು. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News