ಜಮ್ಮು ಕಾಶ್ಮೀರದಲ್ಲಿ ಮೂವರ ಎನ್ ಕೌಂಟರ್: ಯೋಧರ ಮೇಲೆ ಸೇನೆಯಿಂದ ದೋಷಾರೋಪಣೆ

Update: 2020-09-18 16:37 GMT
ಸಾಂದರ್ಭಿಕ ಚಿತ್ರ

ಶ್ರೀನಗರ, ಸೆ. 18: ಜಮ್ಮು ಹಾಗೂ ಕಾಶ್ಮೀರದ ಶೋಫಿಯಾನದಲ್ಲಿ ಜುಲೈ 18ರಂದು ಭಯೋತ್ಪಾದಕರೆಂದು ಮೂವರನ್ನು ಹತ್ಯೆಗೈದ ವಿವಾದಾತ್ಮಕ ಎನ್‌ ಕೌಂಟರ್‌ ನಲ್ಲಿ ಭಾಗಿಯಾಗಿದ್ದ ಯೋಧರ ಮೇಲೆ ಭಾರತೀಯ ಸೇನೆ ದೋಷಾರೋಪಣೆ ಹೊರಿಸಿದೆ.

ಆರೋಪಕ್ಕೆ ಒಳಗಾದ ಯೋಧರ ವಿರುದ್ಧ ಶಿಸ್ತು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸೇನೆ ತಿಳಿಸಿದೆ.

ಪೂರ್ವಯೋಜಿತವಾಗಿ ಎನ್‌ ಕೌಂಟರ್‌ ನಲ್ಲಿ ಮೂವರನ್ನು ಹತ್ಯೆಗೈಯಲಾಗಿದೆ. ಅವರು ತಮ್ಮ ಸಂಬಂಧಿಕರಾಗಿದ್ದು, ಶೋಫಿಯಾನದಲ್ಲಿ ಕಾರ್ಮಿಕರಾಗಿದ್ದರು ಎಂದು ಸ್ಥಳೀಯರು ಹಾಗೂ ಮೃತರ ಕುಟುಂಬ ಹೇಳಿತ್ತು. ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ಅಡಿಯಲ್ಲಿ ಯೋಧರು ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿರುವುದು ಹಾಗೂ ಸುಪ್ರೀಂ ಕೋರ್ಟ್‌ ನಿಂದ ಅನುಮೋದಿಲ್ಪಟ್ಟ ಸೇನಾ ಸಿಬ್ಬಂದಿ ವರಿಷ್ಠ (ಸಿಒಎಎಸ್) ‘ಮಾಡುವ ಹಾಗೂ ಮಾಡಬಾರದ ಕೆಲಸ’ಕ್ಕೆ ವಿರುದ್ಧವಾಗಿ ಕಾರ್ಯನಿರ್ವಹಿಸಿರುವುದು ಸೇನೆ ನಡೆಸಿದ ‘ಕೋರ್ಟ್ ಆಫ್ ಎನ್‌ ಕ್ವಯರಿ’ಯಿಂದ ಬಹಿರಂಗಗೊಂಡಿದೆ.

‘‘ಅಂಶಿಪೋರಾದ ಎನ್‌ ಕೌಂಟರ್ ಕುರಿತ ಸೇನಾ ಪ್ರಾಧಿಕಾರ ಆದೇಶಿಸಿದ ವಿಚಾರಣೆ ಪೂರ್ಣಗೊಂಡಿದೆ. ಕಾರ್ಯಾಚರಣೆ ಸಂದರ್ಭ 1990ರ ಎಎಫ್‌ಎಸ್‌ಪಿಎ ಅಡಿಯಲ್ಲಿ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಹಾಗೂ ನಿಯಮಕ್ಕೆ ವಿರುದ್ಧವಾಗಿ ಕಾರ್ಯನಿರ್ವಹಿಸಲಾಗಿದೆ ಎಂಬುದನ್ನು ಸೂಚಿಸುವ ನಿರ್ದಿಷ್ಟ ಮೋಲ್ನೋಟದ ಸಾಕ್ಷ್ಯಗಳು ವಿಚಾರಣೆ ಸಂದರ್ಭ ಬೆಳಕಿಗೆ ಬಂದಿದೆ’’ ಎಂದು ರಕ್ಷಣಾ ವಕ್ತಾರ ತಿಳಿಸಿದ್ದಾರೆ.

ವಿಚಾರಣೆ ವೇಳೆ ಸಂಗ್ರಹಿಸಲಾದ ಸಾಕ್ಷ್ಯಗಳು ಅಂಶಿಪೊರಾದಲ್ಲಿ ಹತ್ಯೆಯಾದ ಮೂವರು ಅಪರಿಚಿತ ಭಯೋತ್ಪಾದಕರನ್ನು  ರಾಜೌರಿಯಿಂದ ಬಂದ ಇಮ್ತಿಯಾಝ್ ಅಹ್ಮದ್, ಅಬ್ರಾರ್ ಅಹ್ಮದ್ ಹಾಗೂ ಮುಹಮ್ಮದ್ ಇಬ್ರಾರ್ ಎಂದು ಗುರುತಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.

``ಅವರ ಡಿಎನ್‍ಎ ವರದಿಗೆ ಕಾಯಲಾಗುತ್ತಿದೆ. ಭಯೋತ್ಪಾದನೆಯಲ್ಲಿ ಅಥವಾ ಸಂಬಂಧಿತ ಚಟುವಟಿಕೆಗಳಲ್ಲಿ ಅವರು ಭಾಗಿಯಾಗಿರುವುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ'' ಎಂದು ಅವರು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಮೂವರ ಫೋಟೊಗಳು ವೈರಲ್ ಆದ ಬಳಿಕ ಈ ಎನ್‍ ಕೌಂಟರ್ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅವರನ್ನು ಶೋಫಿಯಾನ ಜಿಲ್ಲೆಯ ಚೌಗಾಂವ್ ಗ್ರಾಮದಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದ ಹಾಗೂ ಜುಲೈ 17ರಂದು ನಾಪತ್ತೆಯಾಗಿದ್ದ ತಮ್ಮ ಸೋದರ ಸಂಬಂಧಿಗಳು ಎಂದು ಕುಟುಂಬವೊಂದು ಗುರುತಿಸಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News