ಕರ್ನಾಟಕ ಕ್ರಾಂತಿಕಾರಿ ಸೇನೆ ಹೆಸರಿನಲ್ಲಿ ಹಣ ಸಂಗ್ರಹಿಸಿ ವಂಚನೆ : ದೂರು

Update: 2020-09-19 17:04 GMT

ಪುತ್ತೂರು : ಕರ್ನಾಟಕ ಕ್ರಾಂತಿಕಾರಿ ಸೇನೆ ಎಂಬ ಹೆಸರಿನಲ್ಲಿ ಸದಸ್ಯತ್ವಕ್ಕಾಗಿ‌ ಹಣ ಸಂಗ್ರಹ ಮಾಡಿರುವುದಲ್ಲದೆ ಬ್ಯಾಂಕ್ ಖಾತೆ ಹಾಗೂ ಐಎಫ್.ಸಿ ನಂಬರ್ ಪಡೆದು ವಂಚನೆ ಮಾಡಿರುವ ಬಗ್ಗೆ ಕರ್ನಾಟಕ ಕ್ರಾಂತಿಕಾರಿ ಸೇನೆಯ ರಾಜ್ಯಾಧ್ಯಕ್ಷ ಡಾ.ಪರಮೇಶ್ವರ ಹಾಗೂ ರಾಜು ಹೊಸ್ಮಠ ವಿರುದ್ಧ ನೊಂದ ಮಹಿಳೆಯರು ಶನಿವಾರ ನಗರ ಠಾಣೆಗೆ ದೂರು ನೀಡಿದ್ದಾರೆ.

ದಲಿತ್ ಸೇವಾ ಸಮಿತಿ ಮೂಲಕ ನಮಗೆ ಪರಿಚಯ ಹೊಂದಿರುವ  ರಾಜು ಹೊಸ್ಮಠ ಹಾಗೂ ಕರ್ನಾಟಕ ಕ್ರಾಂತಿಕಾರಿ ಸೇನೆ ಎಂಬ ಸಂಘಟನೆಯ ರಾಜ್ಯಾಧ್ಯಕ್ಷ ಡಾ. ಪರಮೇಶ್ವರ ಎಂಬುವರು ನಮ್ಮ‌ಬಳಿಯಿಂದ ಒಬ್ಬ ವ್ಯಕ್ತಿ 150 ರಂತೆ 10 ಜನರ ಗುಂಪನ್ನು ಮಾಡಿದಲ್ಲಿ ಒಂದು ಗುಂಪಿಗೆ 1 ಲಕ್ಷ ಸಹಾಯಧನ ನೀಡುವುದಾಗಿ ಹೇಳಿ ರಾಜು ಹೊಸ್ಮಠರವರು ಹಲವಾರು ಮಹಿಳೆಯರಿಂದ 150ರಂತೆ ಸಂಗ್ರಹ ಮಾಡಿರುತ್ತಾರೆ. ಅಲ್ಲದೆ ನಮ್ಮಿಂದ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಫೋಟೊ ಇದನ್ನೆಲ್ಲಾ ಪಡೆದುಕೊಂಡಿರುತ್ತಾರೆ. ಪುತ್ತೂರಿನ ನಗರ ಠಾಣಾ ವ್ಯಾಪ್ತಿಯಲ್ಲಿ ಹಲವರಿಂದ ಹಣ ಪಡೆದುಕೊಂಡು ವಂಚನೆ ಮಾಡಿರುವುದಲ್ಲದೆ ಕಡಬ ಸುಳ್ಯ ಬಂಟ್ವಾಳದಲ್ಲಿಯೂ ಹಣ ಮತ್ತು ದಾಖಲೆಗಳನ್ನು ಪಡೆದು ವಂಚಿಸುತ್ತಾರೆ.  ಇದರಲ್ಲಿ ಡಾ ಪರಮೇಶ್ವರ ಎಂಬವರು ನಮ್ಮಿಂದ ಬ್ಯಾಂಕ್ ಖಾತೆ ನಂಬರ್ ಐ.ಎಫ್.ಸಿ. ಕೋಡ್ ಮತ್ತು ಓ.ಟಿ.ಪಿ ನಂಬರ್ ಗಳನ್ನು ಪಡೆದುಕೊಂಡು ನಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಕೂಡಾ ಲಪಟಾಯಿಸಿರುತ್ತಾರೆ ಎಂದು ಪುತ್ತೂರು ನಗರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News