ಜನರಲ್ ಖಾಸಿಮಿ ಹತ್ಯೆಯಲ್ಲಿ ಪಾತ್ರ ವಹಿಸಿದವರ ವಿರುದ್ಧ ಸೇಡು: ಇರಾನ್ ರೆವೆಲ್ಯೂಶನರಿ ಗಾರ್ಡ್ ವರಿಷ್ಠನ ಬೆದರಿಕೆ

Update: 2020-09-19 17:29 GMT

ಟೆಹರಾನ್,ಸೆ.19: ಜನವರಿಯಲ್ಲಿ ಇರಾಕ್ ‌ನಲ್ಲಿ ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ತನ್ನ ಉನ್ನತ ಸೇನಾ ಜನರಲ್ ಖಾಸಿಮಿ ಸುಲೈಮಾನಿ ಅವರ ಹತ್ಯೆಯಲ್ಲಿ ಪಾತ್ರ ವಹಿಸಿದ ಪ್ರತಿಯೊಬ್ಬನ ಮೇಲೂ ಸೇಡು ತೀರಿಸಿಕೊಳ್ಳಲಾಗುವುದು ಎಂದು ಇರಾನ್‌ನ ಅರೆಸೈನಿಕ ಪಡೆ ರೆವೆಲ್ಯೂಶನರಿ ಗಾರ್ಡ್‌ನ ವರಿಷ್ಠ ಶನಿವಾರ ಬೆದರಿಕೆ ಹಾಕಿದ್ದಾರೆ.

‘‘ ಮಿ. ಟ್ರಂಪ್ ಅವರೇ ನಮ್ಮ ಮಹಾನ್ ಸೇನಾ ಜನರಲ್‌ನ ಹುತಾತ್ಮರಾದುದಕ್ಕೆ ನಾವು ಸೇಡು ತೀರಿಸಿಕೊಳ್ಳಲಿದ್ದೇವೆಂಬುದು ಸ್ಪಷ್ಟ, ಗಂಭೀರ ಹಾಗೂ ನೈಜವಾದುದು’’ ಎಂದು ಜನರಲ್ ಹೊಸೈನ್ ಸಲಾಮಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ರೆವೆಲ್ಯೂಶನರಿ ಗಾರ್ಡ್‌ನ ವೆಬ್‌ಸೈಟ್ ವರದಿ ಮಾಡಿದೆ.

ಜನರಲ್ ಖಾಸಿಮಿ ಸುಲೈಮಾನಿ ಅವರ ಹತ್ಯೆಗೆ ಸೇಡು ತೀರಿಸಿಕೊಳ್ಳುವ ಇರಾನ್‌ನ ಯಾವುದೇ ಪ್ರಯತ್ನಕ್ಕೆ ಕಠೋರವಾದ ಪ್ರತ್ಯುತ್ತ ನೀಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಈ ವಾರದ ಆರಂಭದಲ್ಲಿ ಎಚ್ಚರಿಕೆ ನೀಡಿದ ಬಳಿಕ ಜನರಲ್ ಹೊಸೈನ್ ಸಲಾಮಿ ಈ ಬೆದರಿಕೆ ಹಾಕಿದ್ದಾರೆ.

‘‘ ಒಂದು ವೇಳೆ ಅವರು ಯಾವುದೇ ರೂಪದಲ್ಲಿ ದಾಳಿ ನಡೆಸಿದಲ್ಲಿ ನಾವು ಅದಕ್ಕಿಂತ ಸಾವಿರ ಪಟ್ಟು ಹೆಚ್ಚು ಕಠಿಣವಾಗಿ ಆಕ್ರಮಣ ನಡೆಸಬೇಕೆಂಬ ಲಿಖಿತ ಸೂಚನೆಗಳನ್ನು ಈಗಾಗಲೇ ನೀಡಲಾಗಿದೆ’’ ಎಂದು ಟ್ರಂಪ್ ತಿಳಿಸಿದ್ದಾರೆ.

 ಜನರಲ್ ಖಾಸಿಮಿ ಸುಲೈಮಾನಿ ಅವರ ಹತ್ಯೆಗೆ ಪ್ರತೀಕಾರವಾಗಿ ದಕ್ಷಿಣ ಆಫ್ರಿಕದಲ್ಲಿನ ಅಮೆರಿಕ ರಾಯಭಾರಿಯವರನ್ನು ಹತ್ಯೆಗೈಯಲು ಇರಾನ್ ಸಂಚು ಹೂಡಿದೆಯೆಂಬ ವರದಿಗಳ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷರು ಈ ಎಚ್ಚರಿಕೆ ನೀಡಿದ್ದರು.

ಜನವರಿಯಲ್ಲಿ ಬಾಗ್ದಾದ್‌ನ ವಿಮಾನನಿಲ್ದಾಣದ ಬಳಿಕ ಅಮೆರಿಕದ ವಾಯುಪಡೆ ನಡೆಸಿದ ಡ್ರೋನ್ ದಾಳಿಯಲ್ಲಿ ಜನರಲ್ ಖಾಸಿಂ ಸುಲೈಮಾನಿ ಸಾವನ್ನಪ್ಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News