ವಿಟ್ಲ: ಕುಸಿದು ಬಿದ್ದ ಗುಡ್ಡ; ಮನೆ ಸಂಪೂರ್ಣ ನೆಲಸಮ

Update: 2020-09-19 17:52 GMT

ವಿಟ್ಲ: ಗುಡ್ಡವೊಂದರ ಭಾಗವೊಂದು ಕುಸಿದು ಬಿದ್ದ ಪರಿಣಾಮ ಮನೆಯೊಂದು ಸಂಪೂರ್ಣ ಧರಾಶಾಯಿಯಾಗಿದ್ದು, ಮನೆಯಲ್ಲಿದ್ದವರು ಗಾಯಗೊಂಡ ಘಟನೆ ವಿಟ್ಲ ಸಮೀಪದ ಮಂಗಲಪದವು-ಕೋಡಪದವು ರಸ್ತೆಯ ಬಾಬಟ್ಟ ಎಂಬಲ್ಲಿ ಸಂಭವಿಸಿದೆ.

ಇಂದು ರಾತ್ರಿ 10:30 ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ.

ಘಟನೆ ನಡೆದ ಪ್ರದೇಶದಲ್ಲಿ ಗುಡ್ಡವೊಂದಿದ್ದು, ಇಂದು ಭಾರೀ ಮಳೆ ಸುರಿದ ನಂತರ ಕುಸಿದಿದೆ. ಗುಡ್ಡದ ಒಂದು ಭಾಗ ಮೊದಲಿಗೆ ಅಡುಗೆ ಕೋಣೆಯ ಮೇಲೆ ಬಿದ್ದಿತ್ತು. ಈ ಶಬ್ಧ ಕೇಳಿದ್ದ ಮನೆಯವರು ಕೂಡಲೇ ಮನೆಯಿಂದ ಹೊರಗೆ ಓಡಿದ್ದಾರೆ. ಆದರೆ ಈ ಸಂದರ್ಭ ಗುಡ್ಡ ಸಂಪೂರ್ಣ ಮನೆಯನ್ನು ಆವರಿಸಿದ್ದು, ಮನೆಯವರನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಮನೆಯಲ್ಲಿ 6 ಮಂದಿಯಿದ್ದು, ಇಬ್ಬರಿಗೆ ತೀವ್ರ ಗಾಯಗಳಾಗಿದ್ದು, ಮಂಗಳೂರಿನ ಆಸ್ಪತ್ರೆಗೆ ಕರೆ ತರಲಾಗಿದೆ. ಇನ್ನು ನಾಲ್ವರನ್ನು ವಿಟ್ಲ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

“ಗುಡ್ಡ ಕುಸಿದು ಬಿದ್ದ ಪರಿಣಾಮ ಮನೆ, ಹಂಚು ಯಾವುದೂ ಕಾಣುತ್ತಿಲ್ಲ. ಬರಿ ಮಣ್ಣು ಮಾತ್ರ ಕಾಣಿಸುತ್ತಿದೆ. ಇಲ್ಲೇ ಪಕ್ಕದಲ್ಲಿ ಮತ್ತೊಂದು ಮನೆಯಿದ್ದು, ಅದರಲ್ಲಿ ಇಬ್ಬರು ಹಿರಿಯರು ವಾಸಿಸುತ್ತಿದ್ದಾರೆ. ಈ ಪ್ರದೇಶದಲ್ಲಿರುವ 3 ಮನೆಗಳು ಅಪಾಯದಲ್ಲಿವೆ” ಎಂದು ಸ್ಥಳೀಯ ಇಬ್ರಾಹೀಂ ಎಂಬವರು ಮಾಹಿತಿ ನೀಡಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News