ಮಾಜಿ ಸಿಜೆಐ ವಿರುದ್ಧ ಆರೋಪ ಮಾಡಿದ್ದ ಮಹಿಳೆಯ ಮರುನೇಮಕವು ಆರೋಪ ಸತ್ಯ ಎಂದು ತೋರಿಸುತ್ತದೆ

Update: 2020-09-19 18:05 GMT

ಹೊಸದಿಲ್ಲಿ, ಸೆ. 19: ನಾಗರಿಕರಾದ ನಾವು ಎದ್ದು ನಿಂತು ಹಕ್ಕುಗಳನ್ನು ಕೇಳುವ ಧೈರ್ಯವನ್ನು ಕಳೆದುಕೊಂಡಿದ್ದೇವೆ. ಕರುಣೆ ಮನೆಯಲ್ಲಿ ಆರಂಭವಾಗುತ್ತದೆ. ಯಾರೊಬ್ಬರೂ ಹಿಂಸಾತ್ಮಕವಾಗಬಾರದು. ಆದರೆ, ಸಾಂವಿಧಾನಿಕ ಸಂಸ್ಥೆಗಳ ಮೇಲೆ ಒತ್ತಡ ಹೇರಬೇಕು. ನೈತಿಕ ಒತ್ತಡದಿಂದ ಮಾತ್ರ ವ್ಯವಸ್ಥೆ ಚೇತರಿಸಿಕೊಳ್ಳಬಲ್ಲದು ಎಂದು ಹಿರಿಯ ನ್ಯಾಯವಾದಿ ದುಷ್ಯಂತ ದವೆ ಹೇಳಿದ್ದಾರೆ.

‘ಜಸ್ಟಿಸ್ ಹೊಸ್ಬೆಟ್ ಸುರೇಶ್ ಸ್ಮಾರಕ ಉಪನ್ಯಾಸ’ ಕಾರ್ಯಕ್ರಮದಲ್ಲಿ ‘ದಿ ಸುಪ್ರೀಂ ಕೋರ್ಟ್ ಇನ್ ಡಿಕ್ಲೈನ್: ಫಾರ್ಗಾಟನ್ ಫ್ರೀಡಂ ಆ್ಯಂಡ್ ಇರೋಡೆಡ್ ರೈಟ್’ ವಿಷಯದ ಕುರಿತು ಅವರು ಮಾತನಾಡಿದರು.

ಭಾರತದ ಸಮಷ್ಠಿ ಚಾರಿತ್ರ್ಯ ಕುಸಿದಿದೆ ಎಂದು ಹೇಳಿದ ಅವರು, ಸರಿಯಾದ ಗ್ರಹಿಕೆಯೊಂದಿಗೆ ಇತಿಹಾಸವನ್ನು ಗೌರವಿಸಬೇಕಾಗಿತ್ತು ಹಾಗೂ ಸ್ವೀಕರಿಸಬೇಕಾಗಿತ್ತು. ನಾವು ಹಿಂದಕ್ಕೆ ಹೋಗಿ ಬಾಬರನನ್ನು ಸೋಲಿಸಲು ಸಾಧ್ಯವಿಲ್ಲ ಎಂಬುದನ್ನು ನೆನಪಿನಲ್ಲಿ ಇರಿಸಬೇಕು. ನಮಗೆ ಬಾಬರನ ಬಗ್ಗೆ ಅಸಮ್ಮತಿ ಇದ್ದರೂ ಅಕ್ಬರ್‌ನನ್ನು ಪ್ರಶಂಸಿಸುವುದನ್ನು ಮರೆಯಬಾರದು ಎಂದು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್‌ನ ಅಧ್ಯಕ್ಷರೂ ಆದ ದವೆ ಹೇಳಿದರು.

ಉತ್ತರದಾಯಿ ಹಾಗೂ ಚಾರಿತ್ರ್ಯದಲ್ಲಿ ನ್ಯಾಯಾಂಗ ಕೆಳಗೆ ಕುಸಿಯುತ್ತಿರುವ ಬಗ್ಗೆ ಒತ್ತಿ ಹೇಳಿದ ದವೆ, ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರ ವಿರುದ್ಧದ ಲೈಂಗಿಕ ಕಿರುಕುಳದ ಆರೋಪದ ಬಗ್ಗೆ ಕೂಡ ತನ್ನ ಭಾಷಣದಲ್ಲಿ ಉಲ್ಲೇಖಿಸಿದರು. ಅಲ್ಲದೆ, ದೂರದಾರೆಯನ್ನು ತರುವಾಯ ಅದೇ ಹುದ್ದೆಗೆ ಮರು ನೇಮಕ ಮಾಡಿರುವುದು ಅವರ ಆರೋಪದಲ್ಲಿ ಸತ್ಯತೆ ಇರುವುದನ್ನು ಸೂಚಿಸುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News