ಜಮ್ಮು-ಕಾಶ್ಮೀರ: ಪ್ರವಾಸೋದ್ಯಮ,ಇತರ ಕ್ಷೇತ್ರಗಳ ಉತ್ತೇಜನಕ್ಕಾಗಿ 1,350 ಕೋ.ರೂ.ಗಳ ಪ್ಯಾಕೇಜ್

Update: 2020-09-19 18:25 GMT

ಶ್ರೀನಗರ,ಸೆ.19: ಕೋವಿಡ್-19 ಸಾಂಕ್ರಾಮಿಕ ಮತ್ತು ಭದ್ರತಾ ಸ್ಥಿತಿಯಿಂದಾಗಿ ಆರ್ಥಿಕ ಹಿಂಜರಿತಕ್ಕೆ ಒಳಗಾಗಿರುವ ಪ್ರವಾಸೋದ್ಯಮ ಮತ್ತು ಇತರ ಕ್ಷೇತ್ರಗಳಿಗೆ ಅತ್ಯಂತ ಅಗತ್ಯವಾಗಿರುವ ಉತ್ತೇಜನವನ್ನು ಒದಗಿಸಲು ಜಮ್ಮು-ಕಾಶ್ಮೀರದ ಲೆ.ಗ.ಮನೋಜ ಸಿನ್ಹಾ ಅವರು ಶನಿವಾರ 1,350 ಕೋ.ರೂ.ಗಳ ಆರ್ಥಿಕ ಪ್ಯಾಕೇಜ್‌ನ್ನು ಪ್ರಕಟಿಸಿದರು.

ಪ್ಯಾಕೇಜ್‌ನ ಅಂಗವಾಗಿ ಜಮ್ಮು-ಕಾಶ್ಮೀರದಾದ್ಯಂತ ಒಂದು ವರ್ಷ ಅವಧಿಗೆ ವಿದ್ಯುತ್ ಮತ್ತು ನೀರಿನ್ ಬಿಲ್‌ಗಳಲ್ಲಿ ಶೇ.50ರಷ್ಟನ್ನು ಸರಕಾರವು ಮನ್ನಾ ಮಾಡಿದೆ.

  ಉದ್ಯಮ ರಂಗಕ್ಕೆ ನೆರವಾಗಲು ‘ಐತಿಹಾಸಿಕ ’ ಪ್ಯಾಕೇಜೊಂದರ ಬಗ್ಗೆ ಕೇಂದ್ರವು ಪರಿಶೀಲಿಸುತ್ತಿದೆ ಎಂಬ ಸುಳಿವು ನೀಡಿದ ಸಿನ್ಹಾ,ಇದು ಜಮ್ಮು-ಕಾಶ್ಮೀರದ ಉದ್ಯಮ ಮತ್ತು ಕೈಗಾರಿಕಾ ರಂಗಕ್ಕೆ ಭಾರೀ ಉತ್ತೇಜನವನ್ನು ನೀಡಲಿದೆ ಎಂದರು. ಉದ್ಯಮಗಳ ಸಾಲಗಳ ಮೇಲಿನ ಬಡ್ಡಿಯಲ್ಲಿ ಶೇ.5ರಷ್ಟು ವಿನಾಯಿತಿ ನೀಡಲಾಗಿದೆ ಮತ್ತು ಮುಂದಿನ ವರ್ಷದ ಮಾರ್ಚ್‌ವರೆಗೆ ಎಲ್ಲ ಸಾಲಗಳಿಗೆ ಸ್ಟಾಂಪ್ ಡ್ಯೂಟಿಯನ್ನು ಮನ್ನಾ ಮಾಡಲಾಗಿದೆ ಎಂದ ಅವರು,ಈ ಪ್ಯಾಕೇಜ್ ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮನಿರ್ಭರ ಭಾರತ ಅಭಿಯಾನದಡಿ ಪ್ರಕಟಿಸಿರುವ ಪ್ಯಾಕೇಜ್‌ನಿಂದ ಪ್ರತ್ಯೇಕವಾಗಿದೆ. ನೂತನ ಆರ್ಥಿಕ ಪ್ಯಾಕೇಜಿಗೆ ಜಮ್ಮು-ಕಾಶ್ಮೀರ ಆಡಳಿತವು 950 ಕೋ.ರೂ.ನೇರ ಬೆಂಬಲವನ್ನು ಒದಗಿಸಲಿದೆ ಎಂದರು.

ಆತ್ಮನಿರ್ಭರ ಭಾರತ ಅಭಿಯಾನದಡಿ ಜಮ್ಮು-ಕಾಶ್ಮೀರ ಬ್ಯಾಂಕಿನ ಮೂಲಕ ಜನರಿಗೆ ಈಗಾಗಲೇ 1,400 ಕೋ,ರೂ.ಗಳನ್ನು ಒದಗಿಸಲಾಗಿದೆ ಎಂದ ಅವರು,ಟ್ಯಾಕ್ಸಿ ಚಾಲಕರು,ಸಾಗಾಣಿಕೆದಾರರು,ಆಟೋ ಚಾಲಕರು.ಹೌಸ್‌ಬೋಟ್ ಮಾಲಿಕರು,ಶಿಖರ್‌ವಾಲಾಗಳು (ಬೋಟ್‌ಗಳ ನಾವಿಕರು) ಮತ್ತು ಇತರ ಬಾಧಿತ ಜನರಿಗೆ ಪ್ಯಾಕೇಜೊಂದನ್ನು ಸರಕಾರವು ರೂಪಿಸುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News