‘‘13 ವರ್ಷಗಳು ! .. ಸಮಯ ಹೇಗೆ ಹಾರಿ ಹೋಗುತ್ತದೆ ...! ’’

Update: 2020-09-20 04:51 GMT

ಹೊಸದಿಲ್ಲಿ: ದಕ್ಷಿಣ ಆಫ್ರಿಕಾದ 2007ರಲ್ಲಿ ನಡೆದ ಚೊಚ್ಚಲ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಸಿಡಿಸಿರುವ ಅಪೂರ್ವ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.

  ಅವರ ವಿಶ್ವ ದಾಖಲೆಗೆ 13 ವರ್ಷ ಸಂದಿದೆ. ಡರ್ಬನ್‌ನಲ್ಲಿ 2007, ಸೆ.19ರಂದು ನಡೆದ ಇಂಗ್ಲೆಂಡ್ ವಿರುದ್ಧದ ಗ್ರೂಪ್ ಹಂತದ ಅಂತಿಮ ಪಂದ್ಯದಲ್ಲಿ ಸ್ಟುವರ್ಟ್ ಬ್ರಾಡ್‌ರ ಓವರ್‌ನಲ್ಲಿ ಯುವರಾಜ್ 6 ಸಿಕ್ಸರ್ ಸಿಡಿಸಿದ್ದರು. ಕೇವಲ 12 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು. ಇದು ಟ್ವೆಂಟಿ-20 ಕ್ರಿಕೆಟ್‌ನಲ್ಲಿ ವೇಗದ ಅರ್ಧಶತಕವಾಗಿದೆ.

 ಯುವರಾಜ್ ಅವರು ಆ ಪಂದ್ಯದಲ್ಲಿ ಸಿಕ್ಸರ್ ಹೊಡೆಯುವ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಶನಿವಾರ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ‘‘13 ವರ್ಷಗಳು! ಸಮಯ ಹೇಗೆ ಹಾರಿಹೋಗುತ್ತದೆ !!ನೆನಪು’ ಎಂಬ ಶೀರ್ಷಿಕೆ ನೀಡಿದ್ದಾರೆ.

      ರಾಬಿನ್ ಉತ್ತಪ್ಪಅವರ ವಿಕೆಟ್ ಪತನಗೊಂಡಾಗ ಯುವರಾಜ್ ಸಿಂಗ್ ಬ್ಯಾಟಿಂಗ್ ಮಾಡಲು ಬಂದರು. ಆಗ ಭಾರತದ ಸ್ಕೋರ್ 16.4 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 155 ಆಗಿತ್ತು. ನಾಯಕ ಮಹೇಂದ್ರ ಸಿಂಗ್ ಧೋನಿ ಜೊತೆಗೆ ನಾಲ್ಕನೇ ವಿಕೆಟ್‌ಗೆ 61 ರನ್‌ಗಳ ಜೊತೆಯಾಟ ನೀಡಿದ್ದರು. ಇದರಲ್ಲಿ ಯುವರಾಜ್ ಪಾಲು 58 ರನ್(16ಎ, 3ಬೌ,7ಸಿ) ಯುವರಾಜ್ ಸಿಂಗ್ ಭಾರತದ ಸ್ಕೋರ್‌ನ್ನು 20 ಓವರ್‌ಗಳಲ್ಲಿ 218 ಕ್ಕೆ ತಲುಪಲು ನೆರವಾದರು. ಗೆಲುವಿಗೆ 219 ರನ್ ಗಳಿಸಬೇಕಿದ್ದ ಇಂಗ್ಲೆಂಡ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 200 ರನ್ ಗಳಿಸಿತು. ಭಾರತ 18 ರನ್ ಅಂತರದಲ್ಲಿ ಜಯ ಸಾಧಿಸಿತು.

   2007ರಲ್ಲಿ ಚೊಚ್ಚಲ ಐಸಿಸಿ ಟ್ವೆಂಟಿ-20 ವಿಶ್ವಕಪ್‌ನ್ನು ಭಾರತ ಗೆಲ್ಲುವಲ್ಲಿ ಯುವರಾಜ್ ಸಿಂಗ್ ದೊಡ್ಡ ಕೊಡುಗೆ ನೀಡಿದ್ದಾರೆ. 304 ಏಕದಿನ ಪಂದ್ಯಗಳು, 58 ಟ್ವೆಂಟಿ-20 ಪಂದ್ಯಗಳು ಮತ್ತು 40 ಟೆಸ್ಟ್‌ಗಳಲ್ಲಿ ಆಡಿದ್ದ ಯುವರಾಜ್ ತಮ್ಮ ಎಲೆಕ್ಟ್ರಿಕ್ ಫೀಲ್ಡಿಂಗ್, ಸ್ಫೋಟಕ ಬ್ಯಾಟಿಂಗ್ ಅಥವಾ ಸ್ಮಾರ್ಟ್ ಬೌಲಿಂಗ್ ಮೂಲಕ ಪಂದ್ಯಗಳನ್ನು ಗೆಲ್ಲಬಲ್ಲ ಆಟಗಾರನಾಗಿ ತಂಡದಲ್ಲಿ ಛಾಪು ಮೂಡಿಸಿದ್ದರು. ಕಳೆದ ವರ್ಷ ಜೂನ್ 10ರಂದು ಯುವರಾಜ್ ಅವರು ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದರು.

 ಆದರೆ ಇದೀಗ ಯುವರಾಜ್ ಅವರು ನಿವೃತ್ತಿಯಿಂದ ಹೊರಬರಲು ಅನುಮತಿ ಕೋರಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ಮತ್ತು ಕಾರ್ಯದರ್ಶಿ ಜಯ ಷಾ ಅವರಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News