ಲಯನ್ಸ್ ಶಿಸ್ತು, ಸಂಯಮದ ಸೇವಾ ಸಂಸ್ಥೆ : ಕಾವು ಹೇಮನಾಥ ಶೆಟ್ಟಿ

Update: 2020-09-20 09:29 GMT

ವಿಟ್ಲ : ಅಂತರ್ ರಾಷ್ಟ್ರ ಖ್ಯಾತಿಯ ಸ್ವಯಂ ಸೇವಾ ಸಂಸ್ಥೆಯಾದ ಲಯನ್ಸ್ ಕ್ಲಬ್ ಶಿಸ್ತು, ಸಂಯಮದ ಜೊತೆಗೆ ಸೇವೆಗೆ ಪ್ರಮುಖ ಪ್ರಾಶಸ್ತ್ಯ ನೀಡುತ್ತದೆ. ಎಲ್ಲಾ ಸದಸ್ಯರ ಸಹಭಾಗಿತ್ವದಿಂದ ಕ್ಲಬ್ ಯಶಸ್ವಿಯಾಗಿ ಸಮಾಜದಲ್ಲಿ ಗುರುತಿಸಲ್ಪಡುತ್ತಿದೆ ಎಂದು ಲಯನ್ಸ್ ಜಿಲ್ಲೆ 317 ಡಿ ಪ್ರಾಂತ್ಯ 1, ವಲಯ 1 ರ ವಲಯಾಧ್ಯಕ್ಷರಾದ ಕಾವು ಹೇಮನಾಥ ಶೆಟ್ಟಿ ಹೇಳಿದರು.

ಅವರು ವಿಟ್ಲ ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ ಆಶ್ರಯದಲ್ಲಿ ಒಕ್ಕೆತ್ತೂರು ಲಯನ್ಸ್ ಸಭಾಭವನದಲ್ಲಿ ರವಿವಾರ ನಡೆದ ಲಯನ್ಸ್ ವಲಯ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಜೆಸಿಂತಾ ಸೋಫಿಯಾ ಮಸ್ಕರೇನಸ್ ಅಧ್ಯಕ್ಷತೆ ವಹಿಸಿದರು. ಇದೇ ಸಂದರ್ಭ ಸೇವಾ ಚಟುವಟಿಕೆಯ ಅಂಗವಾಗಿ ಮಂಗಳೂರು ಬಿಜೈಯ ಸ್ನೇಹದೀಪ್ ಎಚ್ಐವಿ ಮಕ್ಕಳ ಪಾಲನಾ ಸಂಸ್ಥೆಗೆ ಅದರ ಟ್ರಸ್ಟಿ ರಶೀದ್ ವಿಟ್ಲ ಅವರಿಗೆ 25,000/- ರೂ. ಚೆಕ್ ಹಸ್ತಾಂತರಿಸಲಾಯಿತು. ಮಂಗಳೂರು ವೆನ್ಲಾಕ್ ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ದಿನನಿತ್ಯ ರೋಗಿಗಳ ಜೊತೆಗಾರರಿಗೆ ರಾತ್ರಿಯ ಭೋಜನ ನೀಡುತ್ತಿರುವ ಎಂ.ಫ್ರೆಂಡ್ಸ್ ಕಾರುಣ್ಯ ಸಂಸ್ಥೆಯನ್ನು ಅಭಿನಂದಿಸಿ ಅದರ ಸ್ಥಾಪಕರು, ಪ್ರಸ್ತುತ ಕಾರ್ಯದರ್ಶಿಯಾಗಿರುವ ರಶೀದ್ ವಿಟ್ಲ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.

ಲಯನ್ಸ್ ಜಿಲ್ಲಾ ಗವರ್ನರ್ ಡಾ. ಗೀತಪ್ರಕಾಶ್ ಅವರು ಶುಭಹಾರೈಸಿದರು. ಇದೇ ಸಂದರ್ಭ ರಮೇಶ್ ಬಾಯಾರ್ ಸಂಪಾದಕತ್ವದ 'ವಿಟಾಲಯನ್' ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಪ್ರಾಂತೀಯ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಪೆಲ್ತಡ್ಕ, ಲಯನ್ಸ್ ಜಿಲ್ಲಾ ಪ್ರಥಮ ಮಹಿಳೆ ಗಾಯತ್ರಿ ಜಿ. ಗೀತಾಪ್ರಕಾಶ್, ಲಯನ್ಸ್ ಜಿಲ್ಲಾ ಕಾರ್ಯದರ್ಶಿ ಮಹಮ್ಮದ್ ಇಕ್ಬಾಲ್, ವಿಟ್ಲ ಮಂಗೇಶ್ ಭಟ್, ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ಕುಮಾರಸ್ವಾಮಿ, ಪುತ್ತೂರು ಲಯನ್ಸ್ ಕ್ಲಬ್ ಅಧ್ಯಕ್ಷ  ರಾಜೇಶ್ ಶೆಟ್ಟಿ, ಕಾವು ಲಯನ್ಸ್ ಕ್ಲಬ್ ಅಧ್ಯಕ್ಷ ರಮೇಶ್ ರೈ, ವಿಟ್ಲ ಲಯನ್ಸ್ ಕೋಶಾಧಿಕಾರಿ ಭಾರತಿ ಪ್ರಕಾಶ್, ಅನಿತಾ ಹೇಮನಾಥ ಶೆಟ್ಟಿ, ಲಿಯೋ ಕಾರ್ಯದರ್ಶಿ ಯುಕ್ತಾ ಡಿ.ಎಂ. ಉಪಸ್ಥಿತರಿದ್ದರು.

ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷೆ ಜೆಸಿಂತ ಎಸ್. ಮಸ್ಕರೇನಸ್ ಸ್ವಾಗತಿಸಿದರು. ಲಿಯೋ ಕ್ಲಬ್ ಅಧ್ಯಕ್ಷೆ ಸ್ಮಿತಾ ಸಿ.ಎಸ್. ರೈ ಪ್ರಾರ್ಥಿಸಿದರು. ಆದಂ ಮಂಗಳಪದವು ಧ್ವಜವಂದನೆ ಮಾಡಿದರು. ಲಯನ್ಸ್ ಕಾರ್ಯದರ್ಶಿ ಹರ್ಷಿತ್ ಕುಮಾರ್ ವಂದಿಸಿದರು. ಪೂರ್ವಾಧ್ಯಕ್ಷೆ ವಿನ್ನಿ ಮಸ್ಕರೇಂನಸ್, ವಿಟಾಲಯನ್ ಸಹಸಂಪಾದಕರಾದ ಜಲಜಾಕ್ಷಿ, ಮಾಲತಿ ಕಾನತ್ತಡ್ಕ ಸಹಕರಿಸಿದರು. ಸಭಾ ಕಾರ್ಯಕ್ರಮದ ಮೊದಲು ವಲಯ ಸಲಹಾ ಸಮಿತಿ ಸಭೆ ಜರುಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News