ಉಮರ್ ಖಾಲಿದ್ ಬಂಧನ: ಕನ್ಹಯ್ಯ ಕುಮಾರ್ ನಿಗೂಢ ಮೌನ

Update: 2020-09-20 13:11 GMT

ಹೊಸದಿಲ್ಲಿ: ದಿಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿ ಜೆಎನ್ ಯು ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ರನ್ನು ಬಂಧಿಸಿ ಒಂದು ವಾರ ಕಳೆದಿದೆ. ದೇಶಾದ್ಯಂತ ಸಾವಿರಾರು ಮಂದಿ  ಉಮರ್ ಖಾಲಿದ್ ಬೆಂಬಲಕ್ಕೆ ನಿಂತಿದ್ದರೆ, ಇನ್ನೂ ಹಲವರು ಖಾಲಿದ್ ವಿರುದ್ಧ ಪೊಲೀಸರು ಕೈಗೊಂಡ ಕ್ರಮವನ್ನು ಪ್ರಶ್ನಿಸಿದ್ದಾರೆ. ಆದರೆ ಈ ನಡುವೆ ಉಮರ್ ಖಾಲಿದ್ ಬಂಧನದ ಬಗ್ಗೆ ಉಮರ್ ರ ಆಪ್ತ ಕನ್ಹಯ್ಯ ಕುಮಾರ್ ಮೌನವಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

‘ಕನ್ಹಯ್ಯ ಕುಮಾರ್ ಎಲ್ಲಿದ್ದಾರೆ ಮತ್ತು ಯಾಕೆ ಮೌನವಾಗಿದ್ದಾರೆ? ಎಂದು ಸಾಮಾಜಿಕ ಜಾಲತಾಣದಲ್ಲಿ ಜನರು ಪ್ರಶ್ನಿಸುತ್ತಿದ್ದಾರೆ. ಉಮರ್ ಖಾಲಿದ್ ಬಂಧನದ ಬಗ್ಗೆ ತಡವಾಗಿ ಕನ್ಹಯ್ಯ ಕುಮಾರ್ ಪೋಸ್ಟ್ ಹಾಕಿದ್ದರೂ , ಕೆಲವು ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಕನ್ಹಯ್ಯ ಕುಮಾರ್ ರಂತಹವರು ಮೌನವಾದರೆ ದಿಲ್ಲಿ ಹಿಂಸಾಚಾರದ ತನಿಖೆಯಲ್ಲಿ ಪೊಲೀಸರ ತನಿಖೆ ಸರಿಯಾಗಿದೆ ಎನ್ನುವ ತಪ್ಪು ಸಂದೇಶ ರವಾನೆಯಾಗುತ್ತದೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಉಮರ್ ಖಾಲಿದ್ ರಿಂದ ಕನ್ಹಯ್ಯ ಈ ಹಿಂದಿನಿಂದಲೇ ದೂರವಾಗುತ್ತಿದ್ದರು ಎನ್ನುವ ಮಾತುಗಳು ಕೇಳಿಬಂದಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿ ಬೇಗುಸರಾಯ್ ನಲ್ಲಿ ಕನ್ಹಯ್ಯ ಸೋಲನುಭವಿಸಿದ ನಂತರ ನಿಧಾನವಾಗಿ ಕನ್ಹಯ್ಯ ಖಾಲಿದ್ ರಿಂದ ಮತ್ತು ಇತರ ಹೋರಾಟಗಳಿಂದ ದೂರವಾಗಿದ್ದರು ಎನ್ನಲಾಗಿದೆ.

ಉಮರ್ ಖಾಲಿದ್ ರ ಬಂಧನದ ವಿರುದ್ಧ ಪ್ರತಿಭಟಿಸಿ ಹೊಸದಿಲ್ಲಿಯಲ್ಲಿ ಸೆಪ್ಟಂಬರ್ 16ರಿಂದ ಸುದ್ದಿಗೋಷ್ಠಿಯೊಂದನ್ನು ಆಯೋಜಿಸಲಾಗಿತ್ತು. ಕನ್ಹಯ್ಯ ಕುಮಾರ್ ಈ ಸುದ್ದಿಗೋಷ್ಟಿಯಲ್ಲಿ ಪ್ರಮುಖರಲ್ಲೊಬ್ಬರಾಗಿ ಭಾಗವಹಿಸುತ್ತಾರೆ ಎನ್ನಲಾಗಿತ್ತು. ಆದರೆ ಕನ್ಹಯ್ಯ ಗೈರಾಗಿದ್ದರು. ದಿಲ್ಲಿ ಹಿಂಸಾಚಾರದ ‘ದಿಕ್ಕು ತಪ್ಪಿದ ತನಿಖೆ’ಯ ಬಗ್ಗೆ ಸುದ್ದಿಗೋಷ್ಠಿಯನ್ನು ಆಯೋಜಿಸಲಾಗಿತ್ತು. ಕನ್ಹಯ್ಯ ಆಗಮಿಸುವಾಗ ತಡವಾಗಬಹುದು ಎನ್ನಲಾಗಿತ್ತು. ಆದರೆ ಕೊನೆಯವರೆಗೂ ಕನ್ಹಯ್ಯ ಸುದ್ದಿಗೋಷ್ಟಿಗೆ ಆಗಮಿಸಿರಲಿಲ್ಲ.

ಖಾಲಿದ್ ಬಂಧನದ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸದ ಬಗ್ಗೆ ಅವರನ್ನು ಪ್ರಶ್ನಿಸಿದ್ದಕ್ಕೆ, “ಸುದ್ದಿಗೋಷ್ಠಿಯಲ್ಲಿ ಭಾಗವಹಿಸದ್ದಕ್ಕೆ ನನ್ನನ್ನು ವೈಯಕ್ತಿಕವಾಗಿ ಯಾಕೆ ಹೊಣೆಗಾರನನ್ನಾಗಿ ಮಾಡುತ್ತೀರಿ?, ಇತರ ವಿಪಕ್ಷಗಳ ನಾಯಕರ ಜೊತೆ ಈ ಪ್ರಶ್ನೆಗಳನ್ನು ಕೇಳಲಾಗುತ್ತಿದೆಯೇ?” ಎಂದು ಪ್ರಶ್ನಿಸಿದ್ದರು.

ಈ ಹಿಂದೆ ಫೆಬ್ರವರಿಯಲ್ಲಿ ಸಿಎಎ ವಿರೋಧಿ ಪ್ರತಿಭಟನೆಗಳು ನಡೆದ ನಂತರ 2 ತಿಂಗಳ ಕಾಲ ಕನ್ಹಯ್ಯ ಮೌನವಾಗಿದ್ದರು. ನಂತರ ಮೇ ತಿಂಗಳಲ್ಲಿ ಅವರು ಮಾತನಾಡಿದ್ದರು ಮತ್ತು ಮಾತನಾಡಲು ತಡವಾದದ್ದಕ್ಕೆ ಲಾಕ್ ಡೌನ್ ಕಾರಣ ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News