ಉಡುಪಿ ವಾಸಿಗಳಿಗೆ 1982ರ ಮೇಘಸ್ಫೋಟದ ನೆನಪು ಹಸಿರುಗೊಳಿಸಿದ 2020ರ ವರ್ಷಧಾರೆ

Update: 2020-09-20 13:39 GMT

ಉಡುಪಿ, ಸೆ.20: ಕಳೆದ ಎರಡು ದಿನಗಳಿಂದ ಸತತವಾಗಿ ಸುರಿದ ಮಳೆ ನಗರದ ಕೇಂದ್ರಭಾಗವೂ ಸೇರಿದಂತೆ ಇಡೀ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಜನಪ್ರವಾಹವನ್ನೇ ಸೃಷ್ಟಿಸಿರುವುದು, ಉಡುಪಿಯ ಹಿರಿಯರಿಗೆ 1982ರಲ್ಲಿ ಉಡುಪಿ ನಗರದಲ್ಲಿ ಸಂಭವಿಸಿದ ಮೇಘಸ್ಪೋಟದ ನೆನಪನ್ನು ಹಸಿರಾಗಿಸಿತು.

1982ರ ಮೇ ತಿಂಗಳ ಪ್ರಾರಂಭದಲ್ಲಿ ಉಡುಪಿ ನಗರವನ್ನೇ ಕೇಂದ್ರವಾಗಿರಿಸಿಕೊಂಡು ಒಮ್ಮೆಗೇ ರಾತ್ರಿ ಮೇಘ ಸ್ಫೋಟವೊಂದು ನಡೆದು, ಕಲ್ಸಂಕ ತೋಡಿನ ಆಸುಪಾಸಿನ ಪ್ರದೇಶದಲ್ಲಿ ಹಿಂದೆಂದೂ ಕಂಡುಕೇಳರಿಯದ ರೀತಿಯಲ್ಲಿ ಹಠಾತ್ ಪ್ರವಾಹ ಸೃಷ್ಚಿಯಾಗಿತ್ತು. ಇದು ಇಡೀ ಪರಿಸರದ ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿತ್ತು.

ಇದರಿಂದಾಗಿ ಅಂದು ಮೂರು ಅಮೂಲ್ಯ ಜೀವಹಾನಿ ಸಂಭವಿಸಿತ್ತಲ್ಲದೇ, 300ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿ ಹಲವು ಹಾನಿಗೊಳಲಾಗಿತ್ತು. ಹಠಾತ್ತನೆ ಕಲ್ಸಂಕ ತೋಡಿನಿಂದ ಹರಿದು ಬಂದ ಜನಪ್ರಳಯದಿಂದ ಅದರ ಆಸುಪಾಸಿನ ಮನೆಯವರು ದಿಕ್ಕೇತೋಚದಂತಾಗಿದ್ದರು.

ಮಣಿಪಾಲ, ಅಲೆವೂರು, ಪೆರಂಪಳ್ಳಿ ಮುಂತಾದ ಎತ್ತರದ ಪ್ರದೇಶದಲ್ಲಿ ಈ ಮೇಘಸ್ಪೋಟದಿಂದ ಒಮ್ಮೆಗೆ ಮಳೆ ಸುರಿದು, ಅದರ ನೀರೆಲ್ಲವೂ ಹರಿದು ಒಮ್ಮಿಂದೊಮ್ಮೆಗೆ ಕಲ್ಸಂಕ ತೋಡಿನಲ್ಲಿ ಹಠಾತ್ತ್ ಪ್ರವಾಹ ಬಂದು, ಅಕ್ಕಪಕ್ಕದ ತಗ್ಗು ಪ್ರದೇಶದ ಮನೆ, ಗದ್ದೆ, ತೋಟಗಳಿಗೆಲ್ಲಾ ನೀರು ನುಗ್ಗಿತ್ತು.

ಯಾರೂ ಊಹಿಸದ ರೀತಿಯಲ್ಲಿ ಹಠಾತ್ ಸಂಭವಿಸಿದ ಈ ಘಟನೆಯಿಂದ ನಗರಸಭೆಯೂ ಪರಿಹಾರಕಾರ್ಯ ಕೈಗೊಳ್ಳಲು ತಡವರಿಸಿದ್ದು, ಪರಿಸ್ಥಿತಿ ತಹಬಂದಿಗೆ ಬರಲು ಒಂದೆರಡು ದಿನಗಳೇ ಬೇಕಾದವು ಎಂದು ಘಟನೆಯನ್ನು ಮೆಲುಕು ಹಾಕಿದ ಹಿರಿಯರೊಬ್ಬರು ನುಡಿದರು. ಇದರಲ್ಲಿ ಸಂತ್ರಸ್ಥರಾದವರಿಗೆ ಎರಡು ವರ್ಷದಲ್ಲಿ ನಿಟ್ಟೂರು ಬಳಿ ಮನೆ ನಿರ್ಮಿಸಿಕೊಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News