10 ಮುಸ್ಲಿಮರ ಹೆಸರು ಹೇಳಿದರೆ ಬಿಡುಗಡೆಗೊಳಿಸುತ್ತೇವೆ ಎಂದಿದ್ದ ಪೋಲಿಸರು: ಜೈಲಿನಿಂದ ಹೊರಬಂದ ವ್ಯಕ್ತಿಯ ಆರೋಪ

Update: 2020-09-20 14:15 GMT

ಹೊಸದಿಲ್ಲಿ,ಸೆ.20: ಕಳೆದ ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ನಡೆದಿದ್ದ ದಂಗೆಗಳಿಗೆ ಸಂಬಂಧಿಸಿದಂತೆ ದಿಲ್ಲಿ ಪೊಲೀಸರು ಹೆಚ್ಚಾಗಿ ಮುಸ್ಲಿಮರನ್ನೇ ಗುರಿಯಾಗಿಸಿಕೊಂಡು ಬಂಧನಗಳನ್ನು ನಡೆಸುತ್ತಿದ್ದು,ಇವರಲ್ಲಿ ಹಲವಾರು ಅಮಾಯಕರೂ ಸೇರಿದ್ದಾರೆ. ಕೇವಲ ಮುಸ್ಲಿಂ ಎಂಬ ಕಾರಣದಿಂದ ಅವರು ಜೈಲು ಸೇರಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಲೇ ಇದ್ದು, ಇತ್ತೀಚಿಗೆ ಜಾಮೀನಿನಲ್ಲಿ ಬಿಡುಗಡೆಗೊಂಡಿರುವ ಆರೋಪಿಯೋರ್ವನ ಹೇಳಿಕೆಯು ಇದನ್ನು ಪುಷ್ಟೀಕರಿಸಿದೆ. ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಈಶಾನ್ಯ ದಿಲ್ಲಿಯ ಲೋನಿ ನಿವಾಸಿ ಇಲ್ಯಾಸ್(28)ನನ್ನು ಬಂಧಿಸಿದ್ದ ಪೊಲೀಸರು ಸಿಸಿಟಿವಿ ತುಣುಕಿನಲ್ಲಿ 10 ಮುಸ್ಲಿಮರನ್ನು ಹೆಸರಿಸಿದರೆ ಆತನನ್ನು ಬಿಡುಗಡೆಗೊಳಿಸುವ ಆಮಿಷವನ್ನು ಒಡ್ಡಿದ್ದರು.

ಐದು ತಿಂಗಳಿಗೂ ಹೆಚ್ಚು ಸಮಯ ಜೈಲಿನಲ್ಲಿ ಕೊಳೆಯುತ್ತಿದ್ದ ಇಲ್ಯಾಸ್ ಈಗ ಬಿಡುಗಡೆಗೊಂಡು ಮನೆಯಲ್ಲಿದ್ದಾನೆ. ಕೋಮುದಂಗೆಗಳ ಸಂದರ್ಭದಲ್ಲಿ ಶಿವವಿಹಾರದಲ್ಲಿಯ ರಾಜಧಾನಿ ಪಬ್ಲಿಕ್ ಸ್ಕೂಲ್‌ನಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಿದ್ದಕ್ಕಾಗಿ ಮಾ.17ರಂದು ಇಲ್ಯಾಸ್ ನನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಇಲ್ಯಾಸ್ ಗೆ ಜಾಮೀನು ಮಂಜೂರಾಗಿತ್ತು. ಅದು ಜಾರಿಗೊಳ್ಳುವ ಎರಡು ದಿನಗಳ ಮುನ್ನವೇ ಅಂದರೆ ಮೇ 14ರಂದು,ಅದೇ ಶಿವವಿಹಾರದ ಡಿಆರ್‌ಪಿ ಸೆಕೆಂಡರಿ ಸ್ಕೂಲ್‌ಗೆ ಹಾನಿಯನ್ನುಂಟು ಮಾಡಿದ್ದಕ್ಕಾಗಿ ಮತ್ತು ಶಾಲೆಯ ಆವರಣದಲ್ಲಿ ಅತಿಕ್ರಮ ಪ್ರವೇಶ ಮಾಡಿದ್ದಕ್ಕಾಗಿ ಇಲ್ಯಾಸ್ ನನ್ನು ಪೊಲೀಸರು ಎರಡನೇ ಬಾರಿ ಬಂಧಿಸಿದ್ದರು.

ಎರಡನೇ ಪ್ರಕರಣದಲ್ಲಿಯೂ ಜಾಮೀನು ಲಭಿಸಿದ ಬಳಿಕ ಕೊನೆಗೂ ಸೆ.3ರಂದು ಇಲ್ಯಾಸ್ ಜೈಲಿನಿಂದ ಮನೆಗೆ ಮರಳಿದ್ದಾನೆ. ಕಸ್ಟಡಿಯಲ್ಲಿದ್ದಾಗ ಆತ ಅನೇಕ ಕಟುಸತ್ಯಗಳನ್ನು ಎದುರಿಸಬೇಕಾಗಿತ್ತು. ‘ಇವರೇ ಅಲ್ಲವೇ ಆಝಾದಿ ಬೇಕು ಎಂದಿದ್ದವರು ’ ಎಂದು ತನ್ನನ್ನು ಮತ್ತು ಠಾಣೆಯಲ್ಲಿದ್ದ ಇತರ ಮುಸ್ಲಿಮರನ್ನು ಪೊಲೀಸರು ನಿಂದಿಸುತ್ತಿದ್ದರು ಎಂದು ಇಲ್ಯಾಸ್ ಹೇಳಿದ್ದಾನೆ.

ಮೊದಲ ಪ್ರಕರಣದಲ್ಲಿ ಇಲ್ಯಾಸ್ ನನ್ನು ಬಂಧಿಸಿದ ಬಳಿಕ ಪೊಲೀಸರು ಆತನನ್ನು ದಯಾಳಪುರ ಠಾಣೆೆಗೆ ಒಯ್ದಿದ್ದರು. ಅಲ್ಲಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಗುಂಪು ಹಿಂಸಾಚಾರದ ದೃಶ್ಯಗಳನ್ನು ತೋರಿಸಿದ್ದ ಪೊಲೀಸರು,ಗುಂಪಿನಲ್ಲಿ ಆತನೂ ಒಬ್ಬನಾಗಿದ್ದ ಎಂದು ಆರೋಪಿಸಿದ್ದರು. ಆದರೆ ಆ ಸಮಯದಲ್ಲಿ ಆ ಸ್ಥಳದಲ್ಲಿ ತನ್ನ ಉಪಸ್ಥಿತಿಯನ್ನು ಇಲ್ಯಾಸ್ ಖಂಡತುಂಡವಾಗಿ ನಿರಾಕರಿಸಿದ ಬಳಿಕ ಪೊಲೀಸರು,ವೀಡಿಯೊದಲ್ಲಿ 10 ಮುಸ್ಲಿಮರನ್ನು ಹೆಸರಿಸಿದರೆ ತಕ್ಷಣವೇ ಬಿಡುಗಡೆಗೊಳಿಸುವುದಾಗಿ ಆತನಿಗೆ ತಿಳಿಸಿದ್ದರು.

ತಾನು ವೀಡಿಯೊದಲ್ಲಿದ್ದ ಕೆಲವು ಹಿಂದುಗಳ ಹೆಸರುಗಳನ್ನು ಹೇಳಲು ಆರಂಭಿಸಿದಾಗ ಪೊಲೀಸರು ತಡೆದು ಮುಸ್ಲಿಮ್ ಹೆಸರುಗಳನ್ನು ಹೇಳುವಂತೆ ತನಗೆ ಸೂಚಿಸಿದ್ದರು ಎಂದು ಇಲ್ಯಾಸ್ ಸ್ಮರಿಸಿಕೊಂಡಿದ್ದಾನೆ. ದಾಂಧಲೆಯಲ್ಲಿ ಇಲ್ಯಾಸ್ ಭಾಗಿಯಾಗಿದ್ದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಇಲ್ಲದಿದ್ದರೂ ಆತನನ್ನು ಮಾಂಡೋಲಿ ಜೈಲಿಗೆ ಅಟ್ಟಲಾಗಿತ್ತು. ‘ನಾನು ತುಂಬ ಗಾಬರಿಗೊಂಡಿದ್ದೆ. ಅವರು ನನ್ನ ಧರ್ಮವನ್ನೇ ನನ್ನ ಅಪರಾಧವನ್ನಾಗಿಸಿದ್ದರು ’ಎಂದು ಇಲ್ಯಾಸ್ ಹೇಳಿದ.

ದಿಲ್ಲಿ ದಂಗೆಗಳಿಗೆ ಸಂಬಂಧಿಸಿದಂತೆ ಪೊಲೀಸರು ತಳೆದಿರುವ ನಿಲುವನ್ನು ಇಲ್ಯಾಸ್ ಪ್ರಕರಣವು ಸ್ಪಷ್ಟವಾಗಿ ಬೆಟ್ಟುಮಾಡಿದೆ.

 ಅಂದ ಹಾಗೆ ಇಲ್ಯಾಸ್ ವಿರುದ್ಧದ ಮೊದಲ ಪ್ರಕರಣದಲ್ಲಿಯ ರಾಜಧಾನಿ ಪಬ್ಲಿಕ್ ಸ್ಕೂಲ್ ಮುಸ್ಲಿಂ ಸಂಸ್ಥೆಗೆ ಸೇರಿದ್ದಾಗಿದೆ. ಪ್ರಕರಣದಲ್ಲಿ ಆತನಿಗೆ ಜಾಮೀನು ಲಭಿಸಿದ ಬಳಿಕ ಪೊಲಿಸರು ದಾಖಲಿಸಿದ್ದ ಎರಡನೇ ಪ್ರಕರಣದಲ್ಲಿಯ ಡಿಆರ್‌ಪಿ ಸ್ಕೂಲ್ ಹಿಂದುಗಳಿಗೆ ಸೇರಿದೆ ಮತ್ತು ಇದು ಪೊಲೀಸರಿಗೆ ಹೆಚ್ಚು ಸೂಕ್ತವಾಗಿತ್ತು. ಆತನ ವಿರುದ್ಧ ಸಾಕ್ಷ್ಯಾಧಾರಗಳೇ ಇಲ್ಲದಿದ್ದ ಆರೋಪಗಳನ್ನು ಹೊರಿಸಿ ಪೊಲೀಸರು ಬಂಧಿಸಿದ್ದರು. ಮೊದಲ ಪ್ರಕರಣದಲ್ಲಿಯ ಜಾಮೀನು ಕಾರ್ಯಗತಗೊಳ್ಳುವ ಮೊದಲೇ ಎರಡನೇ ಪ್ರಕರಣದಲ್ಲಿ ಇಲ್ಯಾಸ್ ಬಂಧನವು ಪೊಲೀಸರು ಆತನನ್ನು ತಮ್ಮ ಕಸ್ಟಡಿಯಲ್ಲಿಯೇ ಇಟ್ಟುಕೊಳ್ಳಲು ಬಯಸಿದ್ದರು ಎನ್ನುವುದನ್ನು ಸೂಚಿಸುತ್ತಿದೆ. ಅಂದ ಹಾಗೆ ಎರಡನೇ ಪ್ರಕರಣದಲ್ಲಿ ನಾಲ್ವರು ಸಾಕ್ಷಿಗಳು ತಮ್ಮ ಹೇಳಿಕೆಗಳಲ್ಲಿ ಇಲ್ಯಾಸ್ ನ ಹೆಸರನ್ನು ಉಲ್ಲೇಖಿಸಿಯೇ ಇರಲಿಲ್ಲ. ಐದನೇ ಸಾಕ್ಷಿಯ ಹೇಳಿಕೆಯು ಇಲ್ಯಾಸ್ ನನ್ನು ಗುರುತಿಸಿತ್ತಾದರೂ,ಆತ ಬೇರೆ ಯಾರದೋ ಒತ್ತಾಸೆಯಿಂದ ಹಾಗೆ ಹೇಳಿದ್ದ.

ಇಲ್ಯಾಸ್ ಜೈಲಿನಲ್ಲಿದ್ದಾಗ ಆತನ ಪರ ವಕೀಲರು ಐದು ಸಲ ಜಾಮೀನು ಅರ್ಜಿಗಳನ್ನು ಸಲ್ಲಿಸಿದ್ದರು.

ಇಲ್ಯಾಸ್ ಜಾಮೀನಿಗೆ ಅರ್ಹನಾಗಿದ್ದ. ಆತನ ವಿರುದ್ಧ ಈ ಹಿಂದೆಂದೂ ಕ್ರಿಮಿನಲ್ ಪ್ರಕರಣ ದಾಖಲಾಗಿರಲಿಲ್ಲ. ಆತ ತನ್ನ ಕುಟುಂಬದಲ್ಲಿ ದುಡಿಯುವ ಏಕೈಕ ವ್ಯಕ್ತಿಯಾಗಿದ್ದ. ಆದರೂ ನ್ಯಾಯಾಲಯಗಳು ಆತನಿಗೆ ಜಾಮೀನು ನೀಡುವ ಬಗ್ಗೆ ಒಲವು ಹೊಂದಿರಲಿಲ್ಲ ಎಂದು ನ್ಯಾಯವಾದಿ ಆದಿಲ್ ಸೈಫುದ್ದೀನ್ ತಿಳಿಸಿದರು.

ಕೃಪೆ: Thewire.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News