ಉಡುಪಿ ಜಿಲ್ಲೆಯಲ್ಲಿ 293 ಮಂದಿಯಲ್ಲಿ ಕೊರೋನ ಸೋಂಕು ಪತ್ತೆ

Update: 2020-09-20 14:11 GMT

ಉಡುಪಿ, ಸೆ.20: ನೋವೆಲ್ ಕೊರೋನ ಸೋಂಕು ರವಿವಾರ ಉಡುಪಿ ಜಿಲ್ಲೆಯಲ್ಲಿ ಒಟ್ಟು 293 ಮಂದಿಯಲ್ಲಿ ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ ಪಾಸಿಟಿವ್ ಬಂದಿರುವ ಒಟ್ಟು ಪ್ರಕರಣಗಳ ಸಂಖ್ಯೆ 15,391ಕ್ಕೇರಿದೆ. ಅಲ್ಲದೇ ಇಂದು 920 ಮಂದಿಯ ಗಂಟಲುದ್ರವ ಮಾದರಿ ಫಲಿತಾಂಶ ನೆಗೆಟಿವ್ ಬಂದಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ರವಿವಾರ ಪಾಸಿಟಿವ್ ಬಂದ 293 ಮಂದಿಯಲ್ಲಿ ಉಡುಪಿ ತಾಲೂಕಿನ 123 ಮಂದಿ, ಕುಂದಾಪುರ ತಾಲೂಕಿನ 95 ಹಾಗೂ ಕಾರ್ಕಳ ತಾಲೂಕಿನ 70 ಮಂದಿ ಸೇರಿದ್ದು, ಹೊರಜಿಲ್ಲೆಯಿಂದ ಉಡುಪಿ, ಮಣಿಪಾಲಕ್ಕೆ ಚಿಕಿತ್ಸೆಗೆಂದು ಬಂದ 5 ಮಂದಿಯಲ್ಲೂ ಕೊರೋನ ಪಾಸಿಟಿವ್ ಪತ್ತೆಯಾಗಿದೆ ಎಂದು ತಿಳಿಸಿದರು.

ಇಂದಿನ 293 ಮಂದಿಯಲ್ಲಿ ಮಕ್ಕಳು ಸೇರಿದಂತೆ 173 ಮಂದಿ ಪುರುಷರು ಹಾಗೂ 120 ಮಂದಿ ಮಹಿಳೆಯರಲ್ಲಿ ಸೋಂಕು ಪತ್ತೆಯಾಗಿದೆ. ಇವರಲ್ಲಿ 73 ಪುರುಷರು ಹಾಗೂ 64 ಮಹಿಳೆಯರಲ್ಲಿ ರೋಗದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎಂದು ಡಾ.ಸೂಡ ಹೇಳಿದರು.

ಪಾಸಿಟಿವ್ ದೃಢಗೊಂಡವರಲ್ಲಿ 217 ಮಂದಿ ಪಾಸಿಟಿವ್ ಬಂದವರ ಸಂಪರ್ಕದಿಂದ, 63 ಮಂದಿ ಶೀತಜ್ವರದಿಂದ ಹಾಗೂ ಏಳು ಮಂದಿ ಉಸಿರಾಟದ ತೊಂದರೆ ಯಿಂದ ಬಳಲುತಿದ್ದು ಸೋಂಕು ಕಾಣಿಸಿಕೊಂಡಿದೆ. ದೇಶೀಯ ಪ್ರವಾಸದಿಂದ ಮರಳಿದ ಇಬ್ಬರು ಹಾಗೂ ವಿದೇಶಿ ಪ್ರವಾಸದಿಂದ ಬಂದ ಒಬ್ಬನಲ್ಲಿ ಸೋಂಕು ಕಾಣಿಸಿಕೊಂಡಿದೆ. ಉಳಿದಂತೆ ಮೂರು ಮಂದಿಯ ಸೋಂಕಿನ ಸಂಪರ್ಕ ಇನ್ನೂ ಪತ್ತೆಯಾಗಬೇಕಿದೆ ಎಂದರು.

215 ಮಂದಿ ಗುಣಮುಖ: ಜಿಲ್ಲೆಯಲ್ಲಿ ಇಂದು ಒಟ್ಟು 215 ಮಂದಿ ಚಿಕಿತ್ಸೆಯ ನಂತರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.ಇವರಲ್ಲಿ 38 ಮಂದಿ ಕೋವಿಡ್ ಆಸ್ಪತ್ರೆಗಳಿಂದ, 177 ಮಂದಿ ಹೋಮ್ ಐಸೋಲೇಷನ್‌ನಲ್ಲಿದ್ದು ಗುಣಮುಖರಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಗೊಂಡವರ ಸಂಖ್ಯೆ 13,836ಕ್ಕೇರಿದೆ. ಈಗಾಗಲೇ ಪಾಸಿಟಿವ್ ಬಂದ 1415 ಮಂದಿ ಇನ್ನೂ ಚಿಕಿತ್ಸೆಯಲ್ಲಿದ್ದಾರೆ. ಇವರಲ್ಲಿ 814 ಮಂದಿ ವಿವಿಧ ಆಸ್ಪತ್ರೆ ಗಳಲ್ಲಿ ಹಾಗೂ 601 ಮಂದಿ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಡಿಎಚ್‌ಓ ಹೇಳಿದರು.

1202 ಸ್ಯಾಂಪಲ್ ಸಂಗ್ರಹ: ಸೋಂಕಿನ ಪರೀಕ್ಷೆಗಾಗಿ ರವಿವಾರ ಒಟ್ಟು 1202 ಮಂದಿಯ ಗಂಟಲು ದ್ರವದ ಸ್ಯಾಂಪಲ್‌ಗಳನ್ನು ಪಡೆಯಲಾಗಿದೆ. ಇದರಲ್ಲಿ ಕೋವಿಡ್ ಶಂಕಿತರು 806 ಮಂದಿ, ಕೋವಿಡ್ ಸಂಪರ್ಕಿತರು 121 ಮಂದಿ ಇದ್ದರೆ, ಉಸಿರಾಟ ತೊಂದರೆಯ ಮೂವರು, ಶೀತಜ್ವರದಿಂದ ಬಳಲುವ 68 ಮಂದಿಯ ಸ್ಯಾಂಪಲ್‌ಗಳು ಸೇರಿವೆ. ಅಲ್ಲದೇ ಹಾಟ್‌ಸ್ಪಾಟ್ ಗಳಿಂದ ಬಂದ 204 ಮಂದಿಯ ಸ್ಯಾಂಪಲ್‌ನ್ನು ಪರೀಕ್ಷೆಗೆ ಪಡೆಯಲಾಗಿದೆ ಎಂದು ಡಾ.ಸೂಡ ತಿಳಿಸಿದರು.

ಇಂದು ಪರೀಕ್ಷೆಗಾಗಿ ಪಡೆದ ಸ್ಯಾಂಪಲ್‌ಗಳೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಮಾದರಿಗಳ ಒಟ್ಟು ಸಂಖ್ಯೆ 94,730ಕ್ಕೇರಿದೆ. ಇವುಗಳಲ್ಲಿ ಈವರೆಗೆ 79,160 ನೆಗೆಟಿವ್, 15,391 ಪಾಸಿಟಿವ್ ಬಂದಿವೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 140 ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಇನ್ನು ಒಟ್ಟು 179ಸ್ಯಾಂಪಲ್‌ಗಳ ಪರೀಕ್ಷಾ ವರದಿ ಬರಬೇಕಿದೆ ಎಂದು ಡಾ.ಸೂಡ ಹೇಳಿದರು.

ರವಿವಾರ ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಯಾರೊಬ್ಬರೂ ಮೃತಪಟ್ಟಿಲ್ಲ ಎಂದು ಡಾ.ಸೂಡ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News