ಭಾರೀ ಮಳೆಯಿಂದ ಉಡುಪಿ ಜಿಲ್ಲೆಯ ಬಹುಭಾಗದಲ್ಲಿ ಜಲಪ್ರಳಯ

Update: 2020-09-20 14:23 GMT

ಉಡುಪಿ, ಸೆ. 20: ಜಿಲ್ಲೆಯ ಕಳೆದ ಕೆಲವು ದಶಕಗಳ ಇತಿಹಾಸದಲ್ಲಿ ಕಂಡುಕೇಳದ ರೀತಿಯಲ್ಲಿ ಎರಡು ದಿನಗಳಿಂದ ಸತತವಾಗಿ ಸುರಿದ ವರ್ಷಾಧಾರೆಯಿಂದ ಉಡುಪಿ ಜಿಲ್ಲೆಯ ಬಹುಭಾಗ ಜಲಪ್ರಳಯದಿಂದ ತತ್ತರಿಸಿ ಹೋಗಿದೆ.

ಸುರಿಯುತ್ತಿರುವ ಭಾರೀ ಗಾಳಿ-ಮಳೆಯಿಂದ ಉಡುಪಿ ಜಿಲ್ಲೆಯ ಉಡುಪಿ, ಬ್ರಹ್ಮಾವರ, ಕಾಪು ಹಾಗೂ ಕಾರ್ಕಳ ತಾಲೂಕುಗಳಾದ್ಯಂತ ಜಲಪ್ರವಾಹವೇ ಸೃಷ್ಠಿಯಾಗಿದ್ದು, ಇಡೀ ಜಿಲ್ಲೆಯ ಜನತೆ ತತ್ತರಿಸಿ ಹೋಗಿದ್ದಾರೆ. ನೆರೆಯಿಂದ ಸಾವಿರಕ್ಕೂ ಹೆಚ್ಚು ಮನೆಗಳು ಜಲಾವೃತ ಗೊಂಡಿದ್ದು, ನೂರಾರು ಮನೆಗಳು ಹಾನಿಗೊಳಗಾಗಿವೆ. ಶನಿವಾರ ರಾತ್ರಿಯಿಂದ ಈವರೆಗೆ 827 ಕುಟುಂಬಗಳ 2874 ಮಂದಿಯನ್ನು ಜಿಲ್ಲಾಡಳಿತ ಸ್ಥಳಾಂತರಿಸುವಲ್ಲಿ ಯಶಸ್ವಿಯಾಗಿದೆ.

ಅದರಲ್ಲೂ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಾದ್ಯಂತ ಅದರಲ್ಲೂ ವಿಶೇಷವಾಗಿ ಉಡುಪಿ ತಾಲೂಕಿನಲ್ಲಿ 45 ಸೆ.ಮೀ. ಮಳೆ ಸುರಿದ ಪರಿಣಾಮ ಜಿಲ್ಲೆಯ ಒಟ್ಟು 77 ಗ್ರಾಮಗಳು ಪ್ರವಾಹ ಪೀಡಿತವಾಗಿವೆ. ಒಟ್ಟು 1107 ಮನೆಗಳು ಜಲಾವೃತಗೊಂಡಿದ್ದು, ಅಲ್ಲಿ ಸಿಲುಕಿಕೊಂಡ ಬಹುಸಂಖ್ಯಾತರನ್ನು ರಕ್ಷಿಸಲಾಗಿದೆ. ಸಂತ್ರಸ್ತರಿಗಾಗಿ ಒಟ್ಟು 31 ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾ ಗಿದ್ದು 638 ಪುರುಷರು ಹಾಗೂ 563 ಮಹಿಳೆಯರು ಸೇರಿದಂತೆ ಒಟ್ಟು 1201 ಮಂದಿ ಇಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

ಉಡುಪಿಯ ಸ್ವರ್ಣನದಿ, ಸೀತಾನದಿ, ಉದ್ಯಾವರದ ಪಾಪನಾಶಿನಿ ನದಿಗಳು ಅತೀ ಹೆಚ್ಚು ಹಾನಿಗಳಿಗೆ ಕಾರಣವಾಗಿವೆ. ಸತತ ಮಳೆಯಿಂದ ಮೈದುಂಬಿ ಹರಿಯುತ್ತಿರುವ ಈ ನದಿಗಳು, ತನ್ನ ತೀರ ಪ್ರದೇಶಗಳನ್ನೆಲ್ಲಾ ಜಲಾವೃತ ಗೊಳಿಸಿವೆ. ಸಾವಿರಾರು ಮನೆಗಳಿಗೆ ನೀರು ನುಗ್ಗಿದೆ. ದೂರದಿಂದ ನೋಡುವಾಗ ಇಡೀ ಪ್ರದೇಶಗಳು ಜಲಾವೃತಗೊಂಡಿದ್ದು, ನದಿ ಹಾಗೂ ವಸತಿ ಪ್ರದೇಶಗಳ ನಡುವೆ ವ್ಯತ್ಯಾಸವೇ ಕಾಣಿಸುತ್ತಿಲ್ಲ.

ಕುಂದಾಪುರ ತಾಲೂಕಿನ ಸೌರ್ಪಣಿಕ, ವಾರಾಹಿ, ಚಕ್ರ, ಕುಬ್ಜ, ಬೈಂದೂರು ತಾಲೂಕಿನ ಸುಮನಾವತಿ ನದಿಗಳು ಕೂಡ ತುಂಬಿ ಹರಿಯುತ್ತಿವೆ. ಎನ್‌ಡಿಆರ್‌ಎಫ್, ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ, ಕಂದಾಯ ಅಧಿಕಾರಿಗಳ ತಂಡ, ಕರಾವಳಿ ಕಾವಲು ಪಡೆ ಹಾಗೂ ಹಲವು ಸಾಮಾಜಿಕ ಸಂಘಟನೆಗಳು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿವೆ.

ಉಡುಪಿ ತಾಲೂಕಿನ ಉಡುಪಿ ನಗರ, ಉದ್ಯಾವರ, ಅಂಬಲಪಾಡಿ ಕಿದಿಯೂರು, ಕೆಮ್ಮಣ್ಣು ಹೂಡೆ ಸೇರಿದಂತೆ ಒಟ್ಟು 25 ಗ್ರಾಮಗಳ 518 ಮನೆಗಳು ಜಲಾವೃತಗೊಂಡಿವೆ. ನೆರೆಯಲ್ಲಿ ಸಿಲುಕಿದ 469 ಕುಟುಂಬಗಳ 1406 ಮಂದಿಯನ್ನು ಈವರೆಗೆ ಸ್ಥಳಾಂತರಿಸಲಾಗಿದೆ.

ಹಿರಿಯಡ್ಕ, ಕಲ್ಯಾಣಪುರ, ಕಡೆಕಾರು, ಅಂಬಲಪಾಡಿ ಕಿದಿಯೂರು, ಪುತ್ತೂರು, ಉದ್ಯಾವರ, ಕುಕ್ಕೆಹಳ್ಳಿ ಸೇರಿದಂತೆ 14 ಕಡೆಗಳಲ್ಲಿ ತೆರೆದಿರುವ ಪರಿಹಾರ ಕೇಂದ್ರಗಳಲ್ಲಿ 952 ಆಶ್ರಯ ಪಡೆದುಕೊಂಡಿದ್ದಾರೆ ಎಂದು ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್ ತಿಳಿಸಿದ್ದಾರೆ.

ಬ್ರಹ್ಮಾವರ ತಾಲೂಕಿನ ಹೇರೂರು, ಉಪ್ಪೂರು, ಹಂದಾಡಿ, ಬೈಕಾಡಿ, ನೀಲಾವರ, ಆರೂರು, ಹಾವಂಜೆ ಸೇರಿದಂತೆ ಒಟ್ಟು 18 ಗ್ರಾಮಗಳ 145 ಮನೆಗಳು ಜಲಾವೃತಗೊಂಡಿವೆ. ಇಲ್ಲಿಂದ ಸುಮಾರು 42 ಕುಟುಂಬಗಳ 233 ಮಂದಿಯನ್ನು ರಕ್ಷಿಸಲಾಗಿದೆ. ಇವರಲ್ಲಿ ಕೆಲವು ಮಂದಿ ಹಂದಾಡಿ, ಆರೂರು, ಹೇರೂರಿನಲ್ಲಿ ಸ್ಥಾಪಿಸಲಾಗಿರುವ ಪರಿಹಾರ ಕೇಂದ್ರಗಳಲ್ಲಿ ಒಟ್ಟು 78 ಮಂದಿ ನೆಲೆನಿಂತಿದ್ದಾರೆ ಎಂದು ತಹಶೀಲ್ದಾರ್ ಕಿರಣ್ ಜಿ.ಗೌರಯ್ಯ ತಿಳಿಸಿದ್ದಾರೆ.

ಕಾಪು ತಾಲೂಕಿನ ಕಟಪಾಡಿ ಮೂಡಬೆಟ್ಟು, ಉಳಿರಗೋಳಿ, ಪಾಂಗಾಳ, ಕೋಟ ಮಟ್ಟು, ಮಜೂರು, ಮಲ್ಲಾರು, ಪಾದಬೆಟ್ಟು ಸೇರಿದಂತೆ ಒಟ್ಟು 30 ಗ್ರಾಮಗಳಲ್ಲಿ ನೆರೆ ಉದ್ಭವಿಸಿದ್ದು, 376 ಮನೆಗಳು ಜಲಾವೃತಗೊಂಡಿವೆ. ಸುಮಾರು 293 ಕುಟುಂಬಗಳ 1160 ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. ಇದರಲ್ಲಿ ಕಾಪು ಸುನಾಮಿ ಕೇಂದ್ರ 12 ಪರಿಹಾರ ಕೇಂದ್ರಗಳಲ್ಲಿ ಒಟ್ಟು 93 ಮಂದಿ ಆಶ್ರಯ ಪಡೆದುಕೊಂಡಿದ್ದಾರೆ ಎಂದು ಕಾಪು ತಹಶೀಲ್ದಾರ್ ಮುಹಮ್ಮದ್ ಇಸಾಕ್ ತಿಳಿಸಿದ್ದಾರೆ.

ಕಾರ್ಕಳ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಾದ ಇನ್ನಾ, ಮರ್ಣೆ, ಎಣ್ಣೆಹೊಳೆ ಸೇರಿದಂತೆ 4 ಗ್ರಾಮಗಳ 68 ಮನೆಗಳು ಜಲಾವೃತ ಗೊಂಡಿವೆ. ಇಲ್ಲಿಂದ 23 ಕುಟುಂಬಗಳ 85 ಮಂದಿಯನ್ನು ಸ್ಥಳಾಂತರಿಸಲಾಗಿದೆ. ಇಲ್ಲಿನ ಎರಡು ಪರಿಹಾರ ಕೇಂದ್ರಗಳಲ್ಲಿ 78 ಮಂದಿ ಸಂತ್ರಸ್ತರು ಆಶ್ರಯ ಪಡೆದು ಕೊಂಡಿದ್ದಾರೆ ಎಂದು ಕಾರ್ಕಳ ತಹಶೀಲ್ದಾರ್ ತಿಳಿಸಿದ್ದಾರೆ.

ಕೊಚ್ಚಿ ಹೋದ ನಡೂರು ಸೇತುವೆ !

ಬ್ರಹ್ಮಾವರ ತಾಲೂಕಿನ ನಡೂರು-ಬಂಡೀಮಠ ಸಂಪರ್ಕ ರಸ್ತೆಯಲ್ಲಿರುವ ನಡೂರು ಕಿರುಸೇತುವೆಯು ಭಾರೀ ಮಳೆಯಿಂದಾಗಿ ಇಂದು ನಸುಕಿನ ವೇಳೆ ಕೊಚ್ಚಿಕೊಂಡು ಹೋಗಿರುವ ಬಗ್ಗೆ ವರದಿಯಾಗಿದೆ. ಇದರಿಂದ ಸ್ಥಳೀಯರು ಸಂಪರ್ಕ ಕಡಿದುಕೊಂಡಿದ್ದು, ಪರ್ಯಾಯವಾಗಿ ಬೇರೆ ಮಾರ್ಗ ಯನ್ನು ಬಳಸಿಕೊಳ್ಳು ತ್ತಿದ್ದಾರೆ.

ಉಡುಪಿ ನಗರದ ಕಲ್ಸಂಕ ತೋಡು ಉಕ್ಕಿ ಹರಿದ ಪರಿಣಾಮ ನಗರದ ಸಿಟಿ ಬಸ್ ನಿಲ್ದಾಣದಿಂದ ಕಲ್ಸಂಕದವರೆಗಿನ ರಾಷ್ಟ್ರೀಯ ಹೆದ್ದಾರಿ 169ಎಯಲ್ಲಿ ನೆರೆ ಸೃಷ್ಟಿಯಾಗಿದ್ದು, ಇದರಿಂದ ವಾಹನ ಸಂಚಾರಕ್ಕೆ ತೊಡಕು ಉಂಟಾಗಿದೆ. ಅದೇ ರೀತಿ ಕೃಷ್ಣಮಠದ ರಾಜಾಂಗಣ ಪ್ರದೇಶ ದಲ್ಲಿಯೂ ನೆರೆ ಸೃಷ್ಠಿಯಾಗಿ ಹಲವು ವಾಹನಗಳು ಮುಳುಗಡೆಯಾಗಿವೆ. ನಗರದ ಖಾಸಗಿ ಆಸ್ಪತ್ರೆಯ ಒಳಗೂ ನೀರು ನುಗ್ಗಿರುವ ಬಗ್ಗೆ ವರದಿಯಾಗಿದೆ. ಶ್ರೀಕೃಷ್ಣ ಮಠದ ಆಸುಪಾಸು, ರಾಜಾಂಗಣ ಪ್ರದೇಶಗಳೆಲ್ಲಾ ಜಲಾವ್ರತಗೊಂಡಿವೆ.

ನೆರೆ ಪೀಡಿತ ಪ್ರದೇಶಗಳಲ್ಲಿ ವಿದ್ಯುತ್ ಕಡಿತ

ನೆರೆಪೀಡಿತ ತಗ್ಗು ಪ್ರದೇಶಗಳಲ್ಲಿ ಅಪಾಯದ ಹಿನ್ನೆಲೆಯಲ್ಲಿ ಸದ್ಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ನೆರೆ ಇಳಿದ ತಕ್ಷಣ ಮತ್ತೆ ವಿದ್ಯುತ್ ಸಂಪರ್ಕ ಒದಗಿಸಲಾಗುವುದು ಎಂದು ಮೆಸ್ಕಾಂ ಅಧೀಕ್ಷಕ ನರಸಿಂಹ ಪಂಡಿತ್ ತಿಳಿಸಿದ್ದಾರೆ.

ಭಾರೀ ಮಳೆಯ ಹಿನ್ನೆಲೆಯಲ್ಲಿ ಸುಮಾರು ಒಂದು ಸಾವಿರ ಮಂದಿ ಮೆಸ್ಕಾಂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ವಿದ್ಯುತ್ ಸಮಸ್ಯೆಗೆ ಸಂಬಂಧಿಸಿ ಸಾರ್ವಜನಿಕರು ಮೆಸ್ಕಾಂ ಸಹಾಯವಾಣಿ 1912ಕ್ಕೆ ಕರೆ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.

ಎನ್‌ಡಿಆರ್‌ಎಫ್, ಕೋಸ್ಟ್ ಗಾರ್ಡ್, ನೌಕದಳ, ಅಗ್ನಿಶಾಮಕದಳ ಸೇರಿ ದಂತೆ ವಿವಿಧ ಸಂಘಟನೆಗಳ ನೆರವಿನಿಂದ ಸಾವಿರಾರು ಮಂದಿಯನ್ನು ರಕ್ಷಿಸ ಲಾಗಿದೆ. ಜಿಲ್ಲೆಯಲ್ಲಿ ಇನ್ನು ಎರಡು ದಿನಗಳ ಕಾಲ ರೆಡ್ ಅಲರ್ಟ್ ಇರುವುದರಿಂದ ನದಿ ತೀರ ಹಾಗೂ ಕುದ್ರುಗಳಲ್ಲಿರುವ ಮನೆಯವರು ಕೂಡಲೇ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. ತಹಶೀಲ್ದಾರ್ ಗುರುತಿಸಿರುವ ಪರಿಹಾರ ಕೇಂದ್ರಗಳಲ್ಲಿ ಸಂತ್ರಸ್ತರಿಗೆ ಊಟ ತಿಂಡಿ ವ್ಯವಸ್ಥೆ ಮಾಡಲಾಗುವುದು.
-ಜಿ.ಜಗದೀಶ್, ಜಿಲ್ಲಾಧಿಕಾರಿ ಉಡುಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News