ಮಂಗಳೂರು: ಬಂಧಿತ ಡ್ರಗ್ಸ್ ಆರೋಪಿಗಳು 7 ದಿನ ಪೊಲೀಸ್ ಕಸ್ಟಡಿಗೆ

Update: 2020-09-20 15:05 GMT

ಮಂಗಳೂರು, ಸೆ.20: ಮಾದಕ ವಸ್ತು ಸೇವನೆ ಹಾಗೂ ಸಾಗಾಟ ಆರೋಪದ ಮೇಲೆ ಬಂಧಿತರಾಗಿದ್ದ ಅಕೀಲ್ ನೌಶೀಲ್ (28) ಮತ್ತು ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ (30) ಅವರನ್ನು ಹೆಚ್ಚಿನ ವಿಚಾರಣೆಗೆ ನ್ಯಾಯಾಲಯ 7ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.

ನಗರದಲ್ಲಿ ಸಾರ್ವಜನಿಕರಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ನಗರ ಅಪರಾಧ ಪತ್ತೆ ದಳ ಮತ್ತು ನಾರ್ಕೊಟಿಕ್ ಪೊಲೀಸರು ಇಬ್ಬರು ಆರೋಪಿಗಳನ್ನು ಶನಿವಾರ ಬೆಳಗ್ಗೆ ಬಂಧಿಸಿದ್ದರು. ಸಂಜೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಆರೋಪಿಗಳನ್ನು ಕೋವಿಡ್ ಪರೀಕ್ಷೆಗೊಳಪಡಿಸಿ ಬಳಿಕ ಏಳು ದಿನಗಳ ಪೊಲೀಸ್ ಕಸ್ಟಡಿಗೆ ವಿಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ವರದಿ ಸೋಮವಾರ ಬರುವ ನಿರೀಕ್ಷೆಯಿದೆ.

ಎನರ್ಜಿಗಾಗಿ ಸೇವನೆ: ಡ್ಯಾನ್ಸ್ ಪ್ರದರ್ಶನ ವೇಳೆ ಎನರ್ಜಿಗಾಗಿ ಮಾದಕ ಸೇವನೆ ಚಟ ಆರಂಭಿಸಿದ ಕಿಶೋರ್ ಅಮನ್ ಶೆಟ್ಟಿ ಬಳಿಕ ಆರು ತಿಂಗಳಿನಿಂದ ಆರ್ಥಿಕ ಸಂಕಷ್ಟಕ್ಕೊಳಗಾಗಿ ಮಾದಕ ವಸ್ತು ಮಾರಾಟ ದಂಧೆಗೆ ಒಳಗಾಗಿರುವುದಾಗಿ ಎಂದು ಪೊಲೀಸ್ ವಿಚಾರಣೆ ವೇಳೆ ತಿಳಿದುಬಂದಿದೆ.

ಪ್ರಾಥಮಿಕ ವಿಚಾರಣೆಯಲ್ಲಿ ಕಿಶೋರ್ ಮಾದಕ ದ್ರವ್ಯ ವ್ಯಸನಿಯಾಗಿದ್ದರೂ ಡ್ರಗ್ಸ್ ದಂಧೆ ಶುರು ಮಾಡಿದ್ದು ತೀರಾ ಇತ್ತೀಚೆಗೆ ಎನ್ನುವ ಅಂಶ ತಿಳಿದುಬಂದಿದೆ. ಮುಂಬೈನಲ್ಲಿ ಕೆಲವು ಚಿತ್ರಗಳಲ್ಲಿ ಚಿಕ್ಕ ಪುಟ್ಟ ಪಾತ್ರ ನಿರ್ವಹಿಸುತ್ತ, ಡ್ಯಾನ್ಸರ್ ಆಗಿದ್ದ ಆತ ಕೆಲ ತಿಂಗಳ ಹಿಂದೆ ಮಂಗಳೂರಿಗೆ ಆಗಮಿಸಿದ್ದ. ಇಲ್ಲಿನ ಕುಳಾಯಿಗುಡ್ಡೆಯಲ್ಲಿ ಚಿಕ್ಕ ಹಂಚಿನ ಮನೆಯಲ್ಲಿ ಅವನ ಕುಟುಂಬ ವಾಸವಾಗಿದೆ. ಕೊರೋನ ಲಾಕ್‌ಡೌನ್ ಬಳಿಕ ತೀವ್ರ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದು, ಹಾಗಾಗಿ ಡ್ರಗ್ಸ್ ದಂಧೆಯನ್ನು ಶುರು ಮಾಡಿಕೊಂಡಿದ್ದ. ಮುಂಬೈ ಸ್ನೇಹಿತರ ನಂಟು ಇದ್ದುದರಿಂದ ಅನ್‌ಲಾಕ್ ಬಳಿಕ ಅಲ್ಲಿಂದ ಡ್ರಗ್ಸ್ ತರಿಸಿಕೊಂಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಎಂಡಿಎಂಎ ಸೇವಿಸುತ್ತಿರಲಿಲ್ಲ: ಕಿಶೋರ್ ಅಮನ್ ಶೆಟ್ಟಿ ಕೊಕೇನ್ ಮಾತ್ರ ಸೇವನೆ ಮಾಡುತ್ತಿದ್ದ, ಆದರೆ ಅಪಾಯಕಾರಿ ಎಂಡಿಎಂಎ ಸೇವನೆ ಮಾಡುತ್ತಿರಲಿಲ್ಲ ಎಂದೂ ತಿಳಿಸಿದ್ದಾನೆ. ಆದರೆ ಆರ್ಥಿಕ ಮುಗ್ಗಟ್ಟಿನಿಂದ ಹೊರಬರಲು ಡ್ರಗ್ಸ್ ಪಾರ್ಟಿ ಮಾಡುವ ಉದ್ದೇಶ ಹೊಂದಿದ್ದ. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.

ಎಸೆಸೆಲ್ಸಿ ಕಲಿತರೂ ಸಾಧನೆ ಮಾಡಿದ್ದ: ಕಿಶೋರ್ ಅಮನ್ ಕಲಿತದ್ದು ಕೇವಲ 10ನೇ ತರಗತಿ. ಆದರೆ ಡ್ಯಾನ್ಸಿಂಗ್‌ನಲ್ಲಿ ರಾಜ್ಯದ ಗಮನ ಸೆಳೆದು ಭರವಸೆಯ ಕಲಾವಿದನಾಗಿ ಹೊರಹೊಮ್ಮಿದ್ದ. ಅನೇಕರು ವಿದ್ಯಾಭ್ಯಾಸ ಪಡೆದರೂ ಕೆಲಸ ಸಿಗದೆ ಕಂಗಾಲಾಗುತ್ತಾರೆ. ಆದರೆ ಕಿಶೋರ್ ಎಸೆಸೆಲ್ಸಿ ಕಲಿತರೂ ಅವಕಾಶಗಳು ಅವನಿಗೆ ದೊರೆತು ಉತ್ತಮ ಭವಿಷ್ಯ ರೂಪಿಸಬಹುದಿತ್ತು ಎಂದು ಕುಳಾಯಿಗುಡ್ಡೆಯ ಸ್ಥಳೀಯರು ಹೇಳುತ್ತಾರೆ.

ಮತ್ತಷ್ಟು ವಿಚಾರಣೆ: ನಗರದಲ್ಲಿ ಆರೋಪಿಗಳು ಯುವತಿಯರು, ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿರುವುದು ತಿಳಿದುಬಂದಿದೆ. ಆದರೆ ಬೇರೆ ಯಾವುದೇ ಪ್ರತಿಷ್ಠಿತ ವ್ಯಕ್ತಿಗಳ ಜತೆ ಒಡನಾಟಯಿರುವುದು ತಿಳಿದು ಬಂದಿಲ್ಲ. ಮೇಲ್ನೋಟಕ್ಕೆ ಈ ಆರೋಪಿಗಳು ಮಾದಕ ವಸ್ತು ಸೇವನೆ, ಮಾರಾಟ ಆರೋಪಿಗಳೆಂದು ತಿಳಿದುಬಂದಿದೆ. ಈ ವಿಚಾರದಲ್ಲಿ ಮತ್ತಷ್ಟು ವಿಚಾರಣೆ ನಡೆಸಿದಾಗ ಪ್ರಕರಣ ಸತ್ಯಾಂಶ ತಿಳಿದು ಬರಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News