ಕೋವಿಡ್ ಕೊನೆಗೊಂಡ ಬಳಿಕವೂ 2 ಕೋಟಿಗೂ ಅಧಿಕ ಹೆಣ್ಣು ಮಕ್ಕಳು ಶಾಲೆಗೆ ಮರಳಲಾರರು: ಮಲಾಲಾ ಆತಂಕ

Update: 2020-09-20 15:57 GMT

ಇಸ್ಲಾಮಾಬಾದ್,ಸೆ.20: ಕೋವಿಡ್-19 ಬಿಕ್ಕಟ್ಟು ಅಂತ್ಯಗೊಂಡ ಬಳಿಕವೂ ಜಗತ್ತಿನಾದ್ಯಂತ 2 ಕೋಟಿಗೂ ಅಧಿಕ ಹೆಣ್ಣು ಮಕ್ಕಳು ಶಾಲೆಗೆ ಮರಳದೆ ಇರಬಹುದು ಎಂದು ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕುಗಳ ಹೋರಾಟಗಾರ್ತಿ ಹಾಗೂ ನೊಬೆಲ್ ಪುರಸ್ಕೃತೆ ಮಲಾಲಾ ಯೂಸುಫ್‌ ಝಾಯಿ ಆತಂಕ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ನಡೆದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆದ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಮಾತನಾಡಿದ ಅವರು ಕೋವಿಡ್-19 ಸಾಂಕ್ರಾಮಿಕವು ಮಹಿಳಾ ಶಿಕ್ಷಣದಂತಹ ನಮ್ಮ ಸಾಮೂಹಿಕ ಧ್ಯೇಯಗಳಿಗೆೆ ಆಗಿರುವ ಹಿನ್ನಡೆಯಾಗಿದೆ ಎಂದು ಮಲಾಲಾ ವಿಷಾದಿಸಿದರು.

  ‘‘ ಕೋವಿಡ್ ಬಿಕ್ಕಟ್ಟು ಕೊನೆಗೊಂಡ ಆನಂತರವೂ 2 ಕೋಟಿಗೂ ಅಧಿಕ ಹೆಣ್ಣು ಮಕ್ಕಳು ಇನ್ನೆಂದೂ ಶಾಲಾ ತರಗತಿಗಳಿಗೆ ಮರಳಲಾರರು. ಇದರ ಜೊತೆಗೆ ಜಾಗತಿಕ ಶಿಕ್ಷಣಕ್ಕೆ ಮಾಡಲಾಗುವ ವೆಚ್ಚದ ಅಂತರವು ಈಗಾಗಲೇ ವಾರ್ಷಿಕವಾಗಿ 200 ಶತಕೋಟಿ ಡಾಲರ್‌ನಷ್ಟು ಹೆಚ್ಚಿದೆ’’ ಎಂದು 23 ವರ್ಷ ವಯಸ್ಸಿನ ಮಲಾಲಾ ಹೇಳಿದ್ದಾರೆ.

  ಹೆಣ್ಣು ಮಕ್ಕಳಿಗೆ ಶಿಕ್ಷಣ ಹಾಗೂ ಸಮಾನತೆ ಕುರಿತಾಗಿ ವಿಶ್ವಸಂಸ್ಥೆ ಐದು ವರ್ಷಗಳ ಹಿಂದೆ ನಿಗದಿಪಡಿಸಿದ್ದ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಅಲ್ಪಸ್ವಲ್ಪ ಪ್ರಯತ್ನಗಳನ್ನು ಮಾತ್ರವೇ ಮಾಡಲಾಗಿದೆ ಎಂದು ಮಲಾಲಾ ಬೇಸರ ವ್ಯಕ್ತಪಡಿಸಿದರು.

  ‘‘12 ವರ್ಷ ವಯಸ್ಸಿನ ಪ್ರತಿ ಮಗುವಿಗೂ ಗುಣಮಟ್ಟದ ಶಿಕ್ಷಣವನ್ನು ನೀಡಲು ಅಗತ್ಯವಿರುವ ಆರ್ಥಿಕ ನೆರವನ್ನು ಒದಗಿಸುವಂತಹ ಬದ್ಧತೆಯನ್ನು ಯಾವಾಗ ತೋರುವಿರಿ?, ನಿರಾಶ್ರಿತರ ಶಾಂತಿ ಹಾಗೂ ರಕ್ಷಣೆಗೆ ಯಾವಾಗ ಆದ್ಯತೆ ನೀಡುವಿರಿ? ಹಾಗೂ ಇಂಗಾಲದ ಹೊರಸೂಸುವಿಕೆಯನ್ನು ತಡೆಯಲು ಯಾವಾಗ ನೀತಿಗಳನ್ನು ಜಾರಿಗೊಳಿಸುವಿರಿ? ಎಂದು ಮಲಾಲಾ ಜಾಗತಿಕ ನಾಯಕರನ್ನು ಪ್ರಶ್ನಿಸಿದರು.

ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಈ ಅಧಿವೇಶನದಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಮಾತನಾಡಿ, ಎಲ್ಲರಿಗೂ ಘನತೆ ಹಾಗೂ ಅವಕಾಶವನ್ನು ನೀಡುವ ಆರೋಗ್ಯಕರವಾದ ಜಗತ್ತಿನ ಸೃಷ್ಟಿಗೆ ಶ್ರಮಿಸುವಂತೆ ವಿಶ್ವ ಸಮುದಾಯಕ್ಕೆ ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News