ಹೊಸಬೆಟ್ಟು ಪ್ರದೇಶ 2ನೇ ಬಾರಿ ಮುಳುಗಡೆ

Update: 2020-09-20 16:20 GMT

ಮಂಗಳೂರು, ಸೆ. 20: ನಗರದ ಹೊರವಲಯದ ಹೊಸಬೆಟ್ಟು ಸಮೀಪ ಬೈಲಾರೆ ಪ್ರದೇಶವು ಇದೇ ಮಳೆಗಾಲದಲ್ಲಿ 2ನೇ ಬಾರಿ ಮುಳುಗಡೆ ಯಾಗಿದೆ. ಇಲ್ಲಿ ಬೃಹತ್ ಕಾಲುವೆಗೆ ನೀರು ಹರಿಯುವ ಜಾಗ ಅಗಲ ಕಿರಿದಾಗಿದ್ದು, ಇದನ್ನು ಸರಿ ಪಡಿಸಿಕೊಡಬೇಕು ಎನ್ನುವುದು ಸ್ಥಳೀಯರು ಆಗ್ರಹವಾಗಿದೆ.

ಮುಂಚೂರಿನಲ್ಲಿ ಬೃಹತ್ ಕಾಲುವೆ ಉಕ್ಕಿ ಹರಿದ ಪರಿಣಾಮ ಸುರತ್ಕಲ್ ಚೇಳಾರು ರಸ್ತೆಯಲ್ಲಿ ವಾಹನ ಓಡಾಟಕ್ಕೆ ತಡೆಯಾಯಿತು. ಮುಂಚೂರು ಗ್ರಾಮದ ಈ ರಸ್ತೆ ಕೂಡ 2ನೇ ಬಾರಿಗೆ ಮುಳುಗಡೆಯಾಗುತ್ತಿದೆ.

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ವರ್ಷಧಾರೆಗೆ ಎಕರೆಗಟ್ಟಲೆ ಭತ್ತದ ಪೈರು ನೀರಿನಲ್ಲಿ ಕೊಚ್ಚಿಹೋಗಿದ್ದು, ಲಕ್ಷಾಂತರ ರೂ. ಹಾನಿ ಸಂಭವಿಸಿದೆ. ವಿವಿಧೆಡೆ ಗುಡ್ಡ, ತಡೆಗೋಡೆ ಕುಸಿದು ಮನೆಗಳಿಗೆ ಹಾನಿಯಾಗಿದೆ. ತಗ್ಗು ಪ್ರದೇಶದಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತಡೆಯುಂಟಾಯಿತು.

ಮುಕ್ಕದಲ್ಲಿ ನದಿ ಉಕ್ಕಿ ಹರಿದ ಕಾರಣ ಪುರುಷೋತ್ತಮ ದೇವಾಡಿಗ ಕುಟುಂಬಸ್ಥರು ಬೆಳೆದ ಭತ್ತದ ಪೈರು ಕೊಚ್ಚಿಹೋಗಿದೆ. ಇದರಿಂದ ಲಕ್ಷಾಂತರ ರೂ.ಹಾನಿ ಸಂಭವಿಸಿದೆ. ಚೇಳಾರು ಭಾಗದಲ್ಲಿಯೂ ಕೃಷಿಗೆ ಹಾನಿಯುಂಟಾಗಿದೆ.

ಹೊನ್ನಕಟ್ಟೆ ತಡೆಗೋಡೆ ಕುಸಿತ: ಹೊನ್ನಕಟ್ಟೆ ಬಳಿ ತಡೆಗೋಡೆ ಕುಸಿತವಾಗಿ ಚಂದ್ರಶೇಖರ್ ಅವರ ಮನೆಗೆ ಹಾನಿಯುಂಟಾಗಿದೆ. ಬೆಲೆಬಾಳುವ ವಸ್ತುಗಳು ಕುಸಿತ ಜಾಗದಲ್ಲಿ ಸಿಲುಕಿ ಹಾನಿಗೀಡಾಗಿದೆ. ತಡೆಗೋಡೆ ಮೇಲಿನ ಗುಡ್ಡ ಪ್ರದೇಶದ ಎರಡು ಮನೆಗಳು ಅಪಾಯದ ಸ್ಥಿತಿಯಲ್ಲಿದೆ.

ಇಡ್ಯಾ ಶ್ರೀವಿಠೋಬ ರುಕುಮಾಯಿ ಕ್ಷೇತ್ರ ಬಳಿ ರವಿವಾರ ಭಾರೀ ಮಳೆಗೆ ಜಲಾವೃತವಾಯಿತು. ಸುಮಾರು ವರ್ಷದ ಬಳಿಕ ಇಲ್ಲಿ ನೆರೆ ಪರಿಸ್ಥಿತಿ ಉಂಟಾಗಿದೆ. ಸೂರಿಂಜೆ ದೇಲಂತ ಬೆಟ್ಟುವಿನಲ್ಲಿ ಜಲಾವೃತವಾಗಿ ಸುರಕ್ಷತಾ ಕ್ರಮವಾಗಿ ಹಲವು ಕುಟುಂಬಗಳನ್ನು ಸ್ಥಳಾಂತರಿಸಲಾಯಿತು. ಕಂದಾಯ ಅಧಿಕಾರಿ ನವೀನ್ ನೇತೃತ್ವ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News