ಉಪ್ಪಿನಂಗಡಿ : ನೇತ್ರಾವತಿ- ಕುಮಾರಧಾರ ನದಿಗಳಲ್ಲಿ ನೀರಿನ ಮಟ್ಟ ಏರಿಕೆ

Update: 2020-09-20 16:30 GMT

ಉಪ್ಪಿನಂಗಡಿ : ಕಳೆದ ಮೂರು ದಿನಗಳಿಂದ ನಿರಂತರ ಸುರಿಯುತ್ತಿರುವ ಕುಂಭ ದ್ರೋಣ ಮಳೆಯಿಂದಾಗಿ ದ.ಕ. ಜಿಲ್ಲೆಯ ಜೀವನದಿಗಳಾದ ನೇತ್ರಾವತಿ- ಕುಮಾರಧಾರ ನದಿಗಳಲ್ಲಿ ನದಿ ನೀರಿನ ಮಟ್ಟ ಏರಿಕೆಯಾಗಿದ್ದು, ಉಭಯ ನದಿಗಳು ತುಂಬಿ ಹರಿಯುತ್ತಿವೆ. ಹೀಗೆ ಮಳೆ ಮುಂದುವರಿದ್ದಲ್ಲಿ ನೆರೆ ಭೀತಿಯೂ ಆವರಿಸಿದೆ.

ಉಪ್ಪಿನಂಗಡಿಯಲ್ಲಿ ಶನಿವಾರ ಬೆಳಗ್ಗಿನಿಂದ ರವಿವಾರ ಬೆಳಗ್ಗಿನವರೆಗೆ 149.6 ಮಿ.ಮೀ. ಮಳೆ ಸುರಿದಿದ್ದು, ನೇತ್ರಾವತಿ ನದಿ ನೀರಿನ ಮಟ್ಟ 23 ಮೀಟರ್ ಇದೆ. ಇಲ್ಲಿ ನೇತ್ರಾವತಿ ನದಿಯ ಅಪಾಯದ ಮಟ್ಟ 26.5 ಮೀ. ಆಗಿದೆ. ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ಬಳಿ ನೇತ್ರಾವತಿ ನದಿಗಿಳಿಯಲು ಇರುವ 38 ಮೆಟ್ಟಿಲುಗಳಲ್ಲಿ 11 ಮೆಟ್ಟಿಲುಗಳು ಮುಳುಗದೇ ಬಾಕಿ ಉಳಿದಿವೆ.

ಸಮುದ್ರಮಟ್ಟವನ್ನಾಧರಿಸಿ ಇಲ್ಲಿರುವ ಶಂಭೂರು ಅಣೆಕಟ್ಟಿನವರ ನದಿ ನೀರಿನ ಅಳತೆ ಮಾಪಕದಲ್ಲಿ ನೇತ್ರಾವತಿ ನದಿಯ ಹರಿವಿನ ಮಟ್ಟ 28.1 ಮೀ. ದಾಖಲಾಗಿದೆ. ಇಲ್ಲಿ 31.50 ಮೀ. ನೀರು ದಾಖಲಾದರೆ, ನದಿ ನೀರು ದೇವಾಲಯದ ಅಂಗಣಕ್ಕೆ ಪ್ರವೇಶಿಸಲಿದೆ. ಕುಮಾರಧಾರ ನದಿಗಿಂತ ನೇತ್ರಾವತಿ ನದಿಯಲ್ಲಿ ನೀರಿನ ಪ್ರಮಾಣ ಜಾಸ್ತಿಯಿದ್ದು, ಕುಮಾರಧಾರ ನದಿಯಲ್ಲಿ ನೀರಿನ ಹರಿವು ರಭಸದಿಂದ ಇಲ್ಲದ ಕಾರಣ ದೇವಾಲಯದ ಸಂಗಮ ಸ್ಥಳದಲ್ಲಿ  ನೇತ್ರಾವತಿಯ ಸರಾಗ ಹರಿಯುವಿಕೆಗೆ ಕುಮಾರಧಾರ ನದಿ ನೀರು ತಡೆಯಾಗುತ್ತಿಲ್ಲ. ಅದ್ದರಿಂದ ಇಲ್ಲಿ ನೇತ್ರಾವತಿ ನದಿಯ ನೀರಿನ ಸರಾಗ ಹರಿಯುವಿಕೆ ಸಾಧ್ಯವಾಗುತ್ತಿದ್ದು, ರಭಸದಲ್ಲಿ ನೇತ್ರಾವತಿ ನದಿಯ ನೀರು ಕುಮಾರಧಾರ ನದಿಯ ನೀರನ್ನು ಸೇರಿಕೊಂಡು ಅರಬ್ಬೀಸಮುದ್ರದತ್ತ ಹರಿಯುತ್ತಿದೆ. ನದಿಗಳ ಉಗಮ ಪಾತ್ರದ ಘಟ್ಟ ಪ್ರದೇಶದಲ್ಲಿ ಹೀಗೆ ನಿರಂತರ ಮಳೆ ಮುಂದು ವರಿದ್ದಲ್ಲಿ  ಈ ಭಾಗದಲ್ಲಿ ನೆರೆ ಬರುವ ಸಾಧ್ಯತೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News