ಬೆಳ್ತಂಗಡಿ: ನದಿಗಳಲ್ಲಿ ನೀರಿನ ಮಟ್ಟ ಏರಿಕೆ

Update: 2020-09-20 16:46 GMT

ಬೆಳ್ತಂಗಡಿ : ಕಳೆದೆರಡು ದಿನಗಳಿಂದ ತಾಲೂಕಿನಾದ್ಯಂತ ನಿರಂತರ ಮಳೆ ಸುರಿಯುತ್ತಿರುವ ಪರಿಣಾಮ ತಾಲೂಕಿ  ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಕೆಲವೆಡೆ ನದಿ ಸಮೀಪದ ಕೃಷಿ ಭೂಮಿಗೆ ನೀರು ನುಗ್ಗಿವೆ.

ಶನಿವಾರ ಮುಂಜಾನೆಯಿಂದ ನಿರಂತರ ಮಳೆಯಾಗುತ್ತಿರುವ ಪರಿಣಾಮ ಸೆ.20 ರಂದು ತಾಲೂಕಿನಾದ್ಯಂತ  150.74ಮಿ.ಮೀ. ಮಳೆಯಾಗಿದೆ. ವೇಣೂರು ಹೊಳೆಯ ಕರೀಮಣೇಲ್ ಖಂಡಿಗ, ಸುದೇಕಾರ್, ಅಂಗರಕರಿಯ ಸೇತುವೆ ತಾಗುವಂತೆ ನೀರು ಹರಿಯುತ್ತಿದೆ. ಪಾಣಿಮೇರು, ಕೊಡಮಾಣಿ ಸುತ್ತಮುತ್ತ ಹೊಳೆಯ ಇಕ್ಕೆಲಗಳಲ್ಲೂ ಅಡಿಕೆ ತೋಟಗಳಿಗೆ ನೀರುನುಗ್ಗಿದ ಪರಿಣಾಮ ತೋಟದಲ್ಲಿ ಬಿದ್ದಿದ್ದ  ಅಪಾರ ಪ್ರಮಾಣದ ಅಡಿಕೆ ಹಾಗೂ ತೆಂಗಿನ ಕಾಯಿಗಳು ನೀರುಪಾಲಾಗಿವೆ.

ಹೊಸಂಗಡಿ ಹೊಳೆ ನೀರು ಹೆಚ್ಚಾದ ಪರಿಣಾಮ ಕಾಶಿಪಟ್ಣ, ಗುಂಡಡಪ್ಪು, ಆರ್ಲಡ್ಕ, ಸಂಪಿಗೆದಡಿ, ಹೊಸಂಗಡಿ ಸುತ್ತಮುತ್ತ ಅಡಕೆ ತೋಟಗಳಿಗೆ ನೀರು ನುಗ್ಗಿದೆ ಇದರಿಂದಾಗಿ ತೋಟಗಳಿಗೆ ಹಾನಿಯಾಗಿದೆ. ಶೋಭ, ಕೇಶವ ಹೊಸಂಗಡಿ, ಶೇಖರ್, ಧರಣೇಂದ್ರ ಹಾಗೂ ಇತರರ ತೋಟ ಗಳಿಗೆ ಹಾನಿಯಾಗಿದೆ.

ನಿರಂತರ ಮಳೆಯಿಂದ ಚರಂಡಿಗಳಿಲ್ಲದೆ ನೀರು ರಸ್ತೆಗಳಲ್ಲೇ ಹರಿದ ಪರಿಣಾಮ ಗ್ರಾಮೀಣ ಪ್ರದೇಶಗಳ  ಮಣ್ಣಿನ ರಸ್ತೆಗಳು ವಾಹನ ಸಂಚಾರ ನಡೆಸಲು ಕಷ್ಟಸಾಧ್ಯವಾಗಿದೆ.  ಉಜಿರೆ ಮುಖ್ಯರಸ್ತೆಗಳಲ್ಲಿ ಚರಂಡಿ ನೀರು ಆವರಿಸಿ ಸಮಸ್ಯೆ ಉಂಟುಮಾಡುತ್ತಿದೆ.

ತಾಲೂಕಿನ ಗುಡ್ಡ ಗಾಡುಗಳಲ್ಲಿ, ಬೆಟ್ಟಗಳಲ್ಲಿ ಭಾರೀ ಮಳೆಯಾಗುತ್ತಿದ್ದು ನೇತ್ರಾವತಿ, ಫಲ್ಗುಣಿ, ಕಪಿಲ,  ಮೃತ್ಯುಂಜಯ, ಸೋಮಾವತಿ ನದಿಗಳಲ್ಲಿ ಹಾಗೂ ಉಪನದಿಗಳಲ್ಲಿ  ನೀರಿನ ಮಟ್ಟ ಏರಿಕೆಯಾಗಿದೆ,  ನದಿಗಳು ಉಕ್ಕಿ ಹರಿಯುತ್ತಿದ್ದು ಮಳೆ ನಿರಂತರವಾಗಿ ಮುಂದುವರಿಯು ತ್ತಿರುವ ಹಿನ್ನಲೆಯಲ್ಲಿ ನದಿ ಬದಿಗಳಲ್ಲಿ ವಾಸಿಸುತ್ತಿರುವ ಕುಡುಂಬಗಳಿಗೆ ಮುಂಜಾಗ್ರತೆ ವಹಿಸುವಂತೆ‌ ಸೂಚಿಸಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News