ಸಕ್ರಿಯ ರಾಜಕಾರಣಕ್ಕೆ ಮರಳಿದ ನವಾಝ್ ಸೇನೆ, ಇಮ್ರಾನ್ ಸರಕಾರದ ವಿರುದ್ಧ ವಾಗ್ದಾಳಿ

Update: 2020-09-20 17:58 GMT

  ಇಸ್ಲಾಮಾಬಾದ್,ಸೆ.20: ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಝ್ ಶರೀಫ್ ರವಿವಾರ ಸಕ್ರಿಯ ರಾಜಕಾರಣಕ್ಕೆ ಮರಳಿದ್ದು, ಪಾಕ್ ಸೇನೆ ಹಾಗೂ ಪ್ರಧಾನಿ ಇಮ್ರಾನ್‌ ಖಾನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಪ್ರತಿಪಕ್ಷಗಳು ಪ್ರಧಾನಿ ಇಮ್ರಾನ್ ಖಾನ್‌ರನ್ನು ವಿರೋಧಿಸುವುದಿಲ್ಲ, ಆದರೆ ಅಂತಹ ಅಸಮರ್ಥ ವ್ಯಕ್ತಿಯನ್ನು ಅಧಿಕಾರಕ್ಕೇರಿಸಿದವರ ವಿರುದ್ಧ ಅವು ಅಸಮಾಧಾನ ಹೊಂದಿರುವುದಾಗಿ ಅವರು ಸೇನೆಯ ವಿರುದ್ಧ ವ್ಯಂಗ್ಯವಾಡಿದ್ದಾರೆ.

 ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಆಶ್ರಯದಲ್ಲಿ ವಿಡಿಯೋ ಲಿಂಕ್ ಮೂಲಕ ‘ಸರ್ವ ಪಕ್ಷ’ ಸಮ್ಮೇಳನದಲ್ಲಿ ಮಾತನಾಡಿದ ಅವರು, ಇಮ್ರಾನ್ ಖಾನ್ ನೇತೃತ್ವದ ಆಡಳಿತಾರೂಢ ಪಾಕಿಸ್ತಾನ ತೆಹ್ರಿಕೆ ಇನ್ಸಾಫ್ (ಪಿಟಿಐ) ಸರಕಾರವು ಜನಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸಲು ವಿಫಲವಾಗಿದೆಯೆಂದು ಆರೋಪಿಸಿದರು.

 ಪಾಕ್ ಮುಸ್ಲಿಂ ಲೀಗ್ ನವಾಝ್ (ಪಿಎಂಎಲ್-ಎನ್) ಪಕ್ಷದ ನಾಯಕರಾದ 70 ವರ್ಷದ ನವಾಝ್ ಶರೀಫ್ ಭ್ರಷ್ಟಾಚಾರ ಆರೋಪದಲ್ಲಿ ಬಂಧಿತರಾಗಿದ್ದರು. ಆದರೆ ಚಿಕಿತ್ಸೆಗಾಗಿ ಅವರಿಗೆ ನಾಲ್ಕು ವಾರಗಳ ಕಾಲ ಬ್ರಿಟನ್‌ಗೆ ತೆರಳಲು ಲಾಹೋರ್ ನ್ಯಾಯಾಲಯ ಕಳೆದ ನವೆಂಬರ್‌ನಲ್ಲಿ ಅನುಮತಿ ನೀಡಿತ್ತು. ಆ ಬಳಿಕ ಅವರು ಲಂಡನ್‌ನಲ್ಲಿಯೇ ವಾಸಿಸುತ್ತಿದ್ದಾರೆ.

ಶುಕ್ರವಾರದಂದು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಅಧ್ಯಕ್ಷ ಅಸೀಫ್ ಝರ್ದಾರಿ ದೂರವಾಣಿ ಮೂಲಕ ಕರೆ ಮಾಡಿ, ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಇಮ್ರಾನ್ ಖಾನ್‌ರನ್ನು ಬೆಂಬಲಿಸುತ್ತಿರುವುದಕ್ಕಾಗಿ ಪಾಕ್ ಸೇನೆಯನ್ನು ಟೀಕಿಸಿದ ಅವರು, ಹಾಲಿ ಸರಕಾರವು ದೇಶದಲ್ಲಿ ಸೇನಾಡಳಿತವನ್ನು ಹೇರಿದೆ. ದೇಶದ ಜನತೆ ನಿರಂತರವಾಗಿ ಪ್ರಜಾತಂತ್ರದಿಂದ ವಂಚಿತರಾಗಿದ್ದಾರೆ ಎಂದರು.

ಪಾಕಿಸ್ತಾನ ಮಿಲಿಟರಿ ಸರ್ವಾಧಿಕಾರಿಗಳೇ ಹಲವಾರು ಬಾರಿ ಆಳಿದ್ದು, ಯಾವುದೇ ಚುನಾಯಿತ ಪ್ರಧಾನಿಗೆ ಐದು ವರ್ಷಗಳ ಪೂರ್ಣಾವಧಿಗೆ ಆಡಳಿತ ನಡೆಸಲು ಅವಕಾಶ ನೀಡಲಿಲ್ಲವೆಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News