ಕೋವಿಡ್ ಪರೀಕ್ಷೆಗೆ ಇನ್ನು ಸ್ವದೇಶಿ ಫೆಲುಡಾ ವಿಧಾನ

Update: 2020-09-21 03:41 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಸೆ.21: ದೇಶೀಯವಾಗಿ ಅಭಿವೃದ್ಧಿಪಡಿಸಿದ, ಅತ್ಯಾಧುನಿಕ ಸಿಆರ್‌ಐಎಸ್‌ಪಿಆರ್ ಜೀನ್ ಎಡಿಟಿಂಗ್ ತಂತ್ರಜ್ಞಾನವನ್ನು ಬಳಸಿಕೊಂಡು ಕೋವಿಡ್-19 ಸೋಂಕಿಗೆ ಕಾರಣವಾಗುವ ಎಸ್‌ಎಆರ್‌ಎಸ್-ಕೋವ್-2 ವೈರಾಣುವನ್ನು ನಿಖರವಾಗಿ, ಅಗ್ಗವಾಗಿ ಹಾಗೂ ಕ್ಷಿಪ್ರವಾಗಿ ಪತ್ತೆ ಮಾಡುವ ನೂತನ ಪರೀಕ್ಷಾ ವಿಧಾನದ ವಾಣಿಜ್ಯ ಬಳಕೆಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮತಿ ನೀಡಿದೆ.

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್‌ಐಆರ್)ಯ ಇನ್‌ಸ್ಟಿಟ್ಯೂಟ್ ಆಫ್ ಜೆನೋಮಿಕ್ಸ್ ಆ್ಯಂಡ್ ಇಂಟಗ್ರೇಟಿವ್ ಬಯಾಲಜಿ (ಐಜಿಐಬಿ) ವಿಜ್ಞಾನಿಗಳು ಟಾಟಾ ಸಮೂಹದ ಸಹಯೋಗದಲ್ಲಿ ಅಭಿವೃದ್ಧಿಪಡಿಸಿದ ಈ ನೂತನ ಪರೀಕ್ಷಾ ವಿಧಾನ 'ಫೆಲುಡಾ'ದಲ್ಲಿ ಎರಡು ಗಂಟೆಗಳಲ್ಲಿ ವೈರಸ್ ಸೋಂಕು ಪತ್ತೆಯಾಗುತ್ತದೆ.

"ಟಾಟಾ ಸಿಆರ್‌ಐಎಸ್‌ಪಿಆರ್ ಪರೀಕ್ಷೆಯು, ವಿಶೇಷವಾಗಿ ಪಡೆಯುವ ಸಿಎಎಸ್9 ಪ್ರೊಟೀನ್ ಬಳಸಿಕೊಂಡು ಕೋವಿಡ್-19ಗೆ ಕಾರಣವಾಗುವ ವೈರಾಣುವನ್ನು ಯಶಸ್ವಿಯಾಗಿ ಪತ್ತೆ ಮಾಡುವ ವಿಶ್ವದ ಮೊಟ್ಟಮೊದಲ ರೋಗ ಪತ್ತೆ ಪರೀಕ್ಷೆಯಾಗಿದೆ" ಎಂದು ಸರ್ಕಾರದ ಪ್ರಕಟನೆ ಹೇಳಿದೆ.

ಸಾಂಕ್ರಾಮಿಕ ಆರಂಭವಾದಾಗ ದೇವಜ್ಯೋತಿ ಚಕ್ರವರ್ತಿ ಮತ್ತು ಸೌವಿಕ್ ಮೈತಿ ಅವರನ್ನೊಳಗೊಂಡ ಐಜಿಐಬಿ ತಂಡ ಸಿಕಲ್‌ಸೆಲ್ (ಅನೀಮಿಯಾ) ರೋಗಲಕ್ಷಣ ಪತ್ತೆಗೆ ಜೆನೋಮ್ ಆಧರಿತ ಪತ್ತೆ ಸಾಧನವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾರ್ಯ ಆರಂಭಿಸಿದ್ದರು. ಈ ಆಧಾರದಲ್ಲಿ 100 ದಿನಗಳ ಒಳಗಾಗಿ ಫೆಲುಡಾ ಪರೀಕ್ಷಾ ವಿಧಾನವನ್ನು ಅಭಿವೃದ್ಧಿಪಡಿಸಲಾಗಿದೆ" ಎಂದು ಐಜಿಐಬಿ ನಿರ್ದೇಶಕ ಡಾ.ಅನುರಾಗ್ ಅಗರ್‌ವಾಲ್ ಸ್ಪಷ್ಟಪಡಿಸಿದ್ದಾರೆ.

ನೋವಲ್ ಕೊರೋನ ವೈರಸ್ ಪತ್ತೆ ಮಾಡುವಲ್ಲಿ ಈ ಪರೀಕ್ಷೆ ಶೇಕಡ 96ರಷ್ಟು ಸೂಕ್ಷ್ಮತೆ ಹಾಗೂ ಶೇಕಡ 98ರಷ್ಟು ನಿಖರತೆ ಹೊಂದಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಪ್ರಕಟನೆ ಹೇಳಿದೆ. ಇದು ಗರ್ಭಧಾರಣೆ ಪರೀಕ್ಷೆಯನ್ನೇ ಹೋಲುತ್ತದೆ. ಮಾದರಿಯಲ್ಲಿ ವೈರಸ್ ಇದ್ದಲ್ಲಿ ಅದು ಕಾಗದ ಹೊದಿಕೆಯ ಬಣ್ಣ ಬದಲಿಸುತ್ತದೆ ಎಂದು ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News