ಕಾಶ್ಮೀರದಲ್ಲಿ ಇ-ಕಲಿಕೆಗೆ 2-ಜಿ ಸಾಕು ಎಂದು ಸಮರ್ಥಿಸಿಕೊಂಡ ಕೇಂದ್ರ

Update: 2020-09-21 04:02 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಸೆ.21: ದೇಶದ ಏಕತೆ ಮತ್ತು ಸಮಗ್ರತೆ ದೃಷ್ಟಿಯಿಂದ ಜಮ್ಮು ಕಾಶ್ಮೀರದಲ್ಲಿ ಇಂಟರ್‌ನೆಟ್ ಸೇವೆ ನಿರ್ಬಂಧ ವಿಧಿಸಲಾಗಿದೆ ಎಂದು ಕೇಂದ್ರ ಸರಕಾರ ಸಮರ್ಥಿಸಿಕೊಂಡಿದೆ. ಡಿಜಿಟಲ್ ಶಿಕ್ಷಣ ಹಾಗೂ ಸಾರ್ವಜನಿಕ ಆರೋಗ್ಯ ಸೇವೆಗಳಿಗೆ 2ಜಿ ವೇಗದ ಇಂಟರ್‌ನೆಟ್ ಸಾಕು ಎಂದು ಸಂಸತ್ತಿನಲ್ಲಿ ರವಿವಾರ ಪ್ರತಿಪಾದಿಸಲಾಗಿದೆ.

"ಕಾಶ್ಮೀರದಲ್ಲಿ ಬ್ರಾಡ್‌ಬ್ಯಾಂಡ್ ಸೇವೆ ಯಾವುದೇ ನಿರ್ಬಂಧವಿಲ್ಲದೇ ಲಭ್ಯವಿದ್ದು, 2ಜಿ ವೇಗದ ಮೊಬೈಲ್ ಡಾಟಾ ಸೇವೆಗಳನ್ನು ಕೂಡಾ 2020ರ ಜನವರಿ 24ರಿಂದ ನೀಡಲಾಗಿದೆ. ಸಾಮಾಜಿಕ ಜಾಲತಾಣಗಳ ಲಭ್ಯತೆ ಮೇಲೆ ಹೇರಿದ್ದ ನಿರ್ಬಂಧಗಳನ್ನು ಕೂಡಾ ಮಾರ್ಚ್‌ನಿಂದೀಚೆಗೆ ಸಡಿಲಿಸಲಾಗಿದೆ" ಎಂದು ಗೃಹಖಾತೆ ರಾಜ್ಯ ಸಚಿವ ಜಿ.ಕೆ.ರೆಡ್ಡಿ ಲಿಖಿತ ಉತ್ತರದಲ್ಲಿ ಹೇಳಿದ್ದಾರೆ.

"ಸಾರ್ವಜನಿಕರಿಗೆ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಮಾಹಿತಿ ನೀಡುವುದೂ ಸೇರಿದಂತೆ ಕೋವಿಡ್ ನಿಯಂತ್ರಣ ಕ್ರಮಗಳಿಗೆ 2ಜಿ ವೇಗ ಎಂದೂ ತೊಡಕು ಎನಿಸಿಲ್ಲ. ಇ-ಕಲಿಕಾ ಆ್ಯಪ್‌ಗಳು, ಶಿಕ್ಷಣ ಹಾಗೂ ಇ-ಕಲಿಕಾ ವೆಬ್‌ಸೈಟ್‌ಗಳು 2ಜಿ ವೇಗದಲ್ಲಿ ಲಭ್ಯವಾಗುತ್ತವೆ. ಇ-ಪುಸ್ತಕಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಮತ್ತು ಇತರ ಅಧ್ಯಯನ ಸಾಮಗ್ರಿಗಳ ಡೌನ್‌ಲೋಡ್‌ಗೆ ಈ ವೇಗ ಸಾಕು" ಎಂದು ವಿವರಿಸಿದ್ದಾರೆ.

ಗಂದೆರ್‌ಬಾಲ್ ಮತ್ತು ಉಧಾಂಪುರ ಜಿಲ್ಲೆಗಳಲ್ಲಿ 4ಜಿ ವೇಗದ ಡಾಟಾ ಸೇವೆಗಳನ್ನು ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News