ರಾಜ್ಯಸಭಾ ಉಪಸಭಾಪತಿಯನ್ನು ಹುದ್ದೆಯಿಂದ ಕೆಳಗಿಳಿಸಲು ಅವಿಶ್ವಾಸ ನಿಲುವಳಿ ಮಂಡಿಸಲು ಜತೆಗೂಡಿದ 12 ವಿಪಕ್ಷಗಳು

Update: 2020-09-21 04:56 GMT

ಹೊಸದಿಲ್ಲಿ: ಅಭೂತಪೂರ್ವ ಬೆಳವಣಿಗೆಯೊಂದರಲ್ಲಿ 12 ವಿಪಕ್ಷಗಳು ಜತೆಗೂಡಿ ರಾಜ್ಯಸಭಾ ಉಪಸಭಾಪತಿ ಹರಿವಂಶ್ ಅವರನ್ನು ಹುದ್ದೆಯಿಂದ ಕೆಳಗಿಳಿಸಬೇಕೆಂದು ಕೋರಲು ಅವಿಶ್ವಾಸ ನಿಲುವಳಿಯನ್ನು ಮಂಡಿಸಲು ತೀರ್ಮಾನಿಸಿವೆ. ವಿವಾದಿತ ಕೃಷಿ ಮಸೂದೆಗಳ ಕುರಿತಂತೆ ರವಿವಾರ ಚರ್ಚೆಗಳನ್ನು ಮುಂದುವರಿಸುವಂತೆ ವಿಪಕ್ಷಗಳು ಮಾಡಿದ ಮನವಿಯನ್ನು ಕಡೆಗಣಿಸಿ ಶನಿವಾರದ ಅಧಿವೇಶನವನ್ನು ಅಪರಾಹ್ನ 1 ಗಂಟೆಯ ನಂತರವೂ ಮುಂದುವರಿಸಲು ಉಪಸಭಾಪತಿ ಕೈಗೊಂಡ ನಿರ್ಧಾರದಿಂದ ಉಂಟಾದ ಕೋಲಾಹಲದ ನಂತರದ ಬೆಳವಣಿಗೆ ಇದಾಗಿದೆ.

"ರಾಜ್ಯಸಭಾ ಉಪಸಭಾಪತಿಯವರು ಎಲ್ಲಾ ನಿಯಮಗಳನ್ನು, ಸಂಸದೀಯ ಪ್ರಕ್ರಿಯೆಗಳನ್ನು ಉಲ್ಲಂಘಿಸಿದ್ದಾರೆ. ಕೃಷಿ ಮಸೂದೆಯನ್ನು ವಿರೋಧಿಸುತ್ತಿರುವ ವಿವಿಧ ರಾಜಕೀಯ ಪಕ್ಷಗಳ ಸದಸ್ಯರಿಗೆ ಮಾತನಾಡಲು ಇಂದು ಉಪಸಭಾಪತಿ ಅನುಮತಿಸಿಲ್ಲ,'' ಎಂದು  ವಿಪಕ್ಷಗಳು ಕೈಗೊಂಡ ನಿರ್ಣಯದಲ್ಲಿ ಹೇಳಲಾಗಿದೆ. ಈ ನಿರ್ಣಯವನ್ನು ಬೆಂಬಲಿಸಿರುವ  ಪಕ್ಷಗಳಲ್ಲಿ ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಸಿಪಿಎಂ, ಸಿಪಿಐ, ಆರ್‍ಜೆಡಿ, ಆಪ್, ಟಿಆರ್‍ಎಸ್, ಎಸ್‍ಪಿ, ಐಯುಎಂಎಲ್ ಹಾಗೂ ಕೇರಳ ಕಾಂಗ್ರೆಸ್(ಎಂ) ಸೇರಿವೆ. ನಿರ್ಣಯವನ್ನು ಸಂಸದರೂ ವಕೀಲರೂ ಆಗಿರುವ ಅಭಿಷೇಕ್ ಮನು ಸಿಂಘ್ವಿ ಹಾಗೂ ಕೆ ಟಿ ಎಸ್ ತುಳಸಿ ಸಿದ್ಧಪಡಿಸಿದ್ದಾರೆ.

ಇನ್ನೊಂದೆಡೆ ಶನಿವಾರ ಸದನದಲ್ಲಿ ನಡೆದ ಗದ್ದಲದಲ್ಲಿ ಶಾಮೀಲಾದ ವಿಪಕ್ಷ ಸಂಸದರನ್ನು ವಜಾಗೊಳಿಸಲು ಸರಕಾರ ಅಪೀಲು ಸಲ್ಲಿಸುವ ಸಾಧ್ಯತೆಯಿದ್ದು ಇದಕ್ಕಾಗಿ ನಿಯಮ 256 ಅನ್ವಯಿಸುವ ಸಾಧ್ಯತೆಯಿದೆ. ಏನೇ ಇದ್ದರೂ ಅಂತಿಮ ತೀರ್ಮಾನ ರಾಜ್ಯಸಭಾ ಸಭಾಪತಿಯವರದ್ದಾಗಿರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News