ರಾಜ್ಯಸಭೆಯಲ್ಲಿ ಕೋಲಾಹಲ:ಡೆರೆಕ್ ಒಬ್ರಿಯಾನ್ ಸಹಿತ 8 ಸಂಸದರ ಅಮಾನತು

Update: 2020-09-21 05:01 GMT

ಹೊಸದಿಲ್ಲಿ, ಸೆ.21: ರವಿವಾರ ರಾಜ್ಯಸಭೆಯಲ್ಲಿ ವಿವಾದಾತ್ಮಕ ಕೃಷಿ ಮಸೂದೆಗಳನ್ನು ಮಂಡಿಸುವ ವೇಳೆ ಭಾರೀ ಕೋಲಾಹಲ ಎಬ್ಬಿಸಿದ್ದ ವಿಪಕ್ಷದ 8 ಮಂದಿ ಸದಸ್ಯರನ್ನು ರಾಜ್ಯಸಭೆಯ ಉಳಿದ ಕಾರ್ಯಕಲಾಪಗಳಿಂದ ಅಮಾನತುಗೊಳಿಸಲಾಗಿದೆ. ತೃಣಮೂಲ ಕಾಂಗ್ರೆಸ್‌ನ ಡೆರೆಕ್ ಒಬ್ರಿಯಾನ್, ಆಮ್‌ಆದ್ಮಿ ಪಕ್ಷದ (ಎಎಪಿ) ಸಂಜಯ್ ಸಿಂಗ್, ಕಾಂಗ್ರೆಸ್‌ನ ರಾಜೀವ್ ಸಟವ್ ಹಾಗೂ ಸಿಪಿಎಂನ ಕೆಕೆ ರಾಗೇಶ್ ಅಮಾನತುಗೊಂಡ ಸದಸ್ಯರಾಗಿದ್ದಾರೆ.

"ನಿನ್ನೆ ನಡೆದ ಘಟನೆ ನನಗೆ ನೋವುಂಟುಮಾಡಿದೆ. ಇದು ತರ್ಕವನ್ನು ಧಿಕ್ಕರಿಸುತ್ತದೆ. ಇದು ರಾಜ್ಯಸಭೆಗೆ ಕೆಟ್ಟ ದಿನ'' ಎಂದು ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಹೇಳಿದರು.

 ಸದಸ್ಯರುಗಳು ಪೇಪರ್‌ಗಳನ್ನು ಎಸೆದರು, ಮೈಕ್‌ಗಳನ್ನು ಕಿತ್ತುಹಾಕಿದರು ಹಾಗೂ ದೈಹಿಕವಾಗಿ ಬೆದರಿಕೆ ಒಡ್ಡಿದರು ಎಂದು ಉಪಾಧ್ಯಕ್ಷ ಹರಿವಂಶ ಸಿಂಗ್ ಹೇಳಿದ್ದಾರೆ.

ವಿರೋಧ ಪಕ್ಷಗಳು ಮತ್ತು ರೈತರ ಪ್ರತಿಭಟನೆಗೆ ಕಾರಣವಾಗಿದ್ದ ಸರಕಾರದ ಮೂರು ಕೃಷಿ ಮಸೂದೆಗಳ ಪೈಕಿ ಎರಡು ಮಸೂದೆಗಳು ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆ ರವಿವಾರ ಅಂಗೀಕರಿಸಲ್ಪಟ್ಟವು. ಸಂಜಯ ಸಿಂಗ್ ಹಾಗೂ ಕಾಂಗ್ರೆಸ್ ಸದಸ್ಯ ರಾಜೀವ್ ಸಟವ್ ಅವರು ಮೇಲ್ಮನೆಯ ಮಧ್ಯಭಾಗದಲ್ಲಿರುವ ಸೆಕ್ರಟರಿ ಜನರಲ್ ಮೇಜಿನ ಮೇಲೆ ಹತ್ತಿದ್ದರು. ತೃಣಮೂಲ ಕಾಂಗ್ರೆಸ್ ಸದಸ್ಯ ಡೆರೆಕ್ ಒಬ್ರಿಯಾನ್ ಅವರು ಅಧ್ಯಕ್ಷರ ಎದುರು ರೂಲ್‌ಬುಕ್‌ನ್ನು ಬೀಸಿದರು ಮತ್ತು ಕೆಲವು ಸದಸ್ಯರು ತಮ್ಮ ಆಸನಗಳಲ್ಲಿದ್ದ ಮೈಕ್‌ಗಳನ್ನು ಹೊರತೆಗೆದರು. ಇನ್ನೂ ಕೆಲವು ಸದಸ್ಯರು ಮಸೂದೆಯ ಪ್ರತಿಗಳನ್ನು ಸಹ ಹರಿದುಹಾಕಿ ರೈತ ವಿರೋಧಿ ಮಸೂದೆ ಮಂಡನೆಗೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News