ಉಡುಪಿ: ತಗ್ಗಿದ ಮಳೆ, ಇಳಿದ ನೆರೆ

Update: 2020-09-21 05:10 GMT

ಉಡುಪಿ, ಸೆ.21: ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳೆಯಿಂದ ತತ್ತರಿಸಿದ್ದ ಉಡುಪಿ ಜಿಲ್ಲೆಯಲ್ಲಿ ಸದ್ಯ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ನೆರೆ ಇಳಿಮುಖವಾಗಿದೆ. ರಾತ್ರಿ ಮಳೆಯಾಗಿದ್ದರೂ ಬೆಳಗ್ಗೆಯಿಂದ ಮಳೆಯ ಪ್ರಮಾಣ ಇಳಿಕೆಯಾಗಿದೆ.

ನಿನ್ನೆ ಉಂಟಾಗಿದ್ದ ಜಲಪ್ರಳಯದಿಂದ ಅಸ್ತವ್ಯಸ್ತಗೊಂಡಿದ್ದ ಜನರ ಜೀವನ ಇದೀಗ ಸಹಜ ಸ್ಥಿತಿಗೆ ಮರಳುತ್ತಿದೆ. ಜಿಲ್ಲೆಯ ನಾಲ್ಕೂ ತಾಲೂಕುಗಳ ಹಲವು ಗ್ರಾಮಗಳಲ್ಲಿ ನೆರೆ ನೀರಿನ ಪ್ರಮಾಣ ತಗ್ಗಿರುವ ಬಗ್ಗೆ ವರದಿಯಾಗಿದೆ. ಇದರಿಂದ ಹಲವು ಕುಟುಂಬಗಳು ಮರಳಿ ಮನೆಗೆ ಬಂದಿವೆ, ಇನ್ನು ಕೆಲವು ಕುಟುಂಬಗಳು ಪರಿಹಾರ ಕೇಂದ್ರದಲ್ಲಿ ನೆಲೆನಿಂತಿವೆ. ಆದರೆ ನೆರೆಯಿಂದ ಮನೆಗಳ ಒಳಗೆಲ್ಲ ಕೆಸರು ತುಂಬಿದೆ. 

ರಾತ್ರಿ ನಿರಂತರವಾಗಿ ಮಳೆಯಾಗಿದ್ದು, ಉಡುಪಿ ನಗರದ ಸಂಕ ತೋಡು ತುಂಬಿ ಹರಿಯುತ್ತಿವೆ. ಆದರೆ ಮಠದ ಬೆಟ್ಟು ಬನ್ನಂಜೆ ಗರಡಿ ರಸ್ತೆಯಲ್ಲಿ ಶೇ.50ರಷ್ಟು ನೆರೆ ಪ್ರಮಾಣ ತಗ್ಗಿದೆ. ಮಠದಬೆಟ್ಟುಕೊಪ್ಪರತೋಟ ಎಂಬಲ್ಲಿ ಕೃಷ್ಣಪ್ಪ ಪೂಜಾರಿ ಎಂಬವರ ದನದ ಕೊಟ್ಟಿಗೆ ನಿನ್ನೆ ಸುರಿದ ಮಳೆಯಿಂದ ಭಾಗಶಃ ಕುಸಿದಿದೆ.

ಉಡುಪಿ ಜಿಲ್ಲೆಯ ಕಳೆದ ಕೆಲವು ದಶಕಗಳ ಇತಿಹಾಸದಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಕಳೆದ ಎರಡು ದಿನಗಳಲ್ಲಿ ಸತತವಾಗಿ ಭಾರೀ ಮಳೆ ಸುರಿದಿತ್ತು. ಇದರಿಂದ ರವಿವಾರ ಜಿಲ್ಲೆಯ ಬಹುಭಾಗ ಜಲಪ್ರಳಯದಿಂದ ತತ್ತರಿಸಿತ್ತು. ಉಡುಪಿ, ಬ್ರಹ್ಮಾವರ, ಕಾಪು ಹಾಗೂ ಕಾರ್ಕಳ ತಾಲೂಕುಗಳಾದ್ಯಂತ ಜಲಪ್ರವಾಹವೇ ಸೃಷ್ಟಿಯಾಗಿತ್ತು. ನೆರೆಯಿಂದ ಸಾವಿರಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದವು. ನೂರಾರು ಮನೆಗಳು ಹಾನಿಗೊಳಗಾಗಿವೆ.

ಉಡುಪಿಯ ಸ್ವರ್ಣಾನದಿ, ಸೀತಾನದಿ, ಉದ್ಯಾವರದ ಪಾಪನಾಶಿನಿ ನದಿಗಳು ರವಿವಾರ ಮೈದುಂಬಿ ಹರಿದ ಪರಿಣಾಮ ತೀರ ಪ್ರದೇಶಗಳನ್ನೆಲ್ಲ ಜಲಾವೃತಗೊಂಡಿದ್ದವು. ಸದ್ಯ ಈ ನದಿಗಳಲ್ಲಿ ನೀರಿನ ಪ್ರಮಾಣ ತಗ್ಗಿದ್ದು, ನೆರೆ ಇಳಿಮುಖವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News