ಕೃಷಿ ಮಸೂದೆಗಳ ವಿರುದ್ಧ ಕೋರ್ಟ್ ಮೆಟ್ಟಿಲೇರಲು ಪಂಜಾಬ್ ಸರಕಾರ ನಿರ್ಧಾರ

Update: 2020-09-21 06:35 GMT

ಹೊಸದಿಲ್ಲಿ, ಸೆ.21:ಸಂಸತ್ತಿನಲ್ಲಿ ಅಂಗೀಕಾರವಾದ ಕೃಷಿ ಮಸೂದೆ ರೈತರ ವಿರೋಧಿ ಎಂದು ಕರೆದಿರುವ ಪಂಜಾಬ್ ಸರಕಾರ ಮಸೂದೆಯ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲು ನಿರ್ಧರಿಸಿದೆ.

ಕೇಂದ್ರ ಸರಕಾರದ ಅಸಾಂವಿಧಾನಿಕ,ಪ್ರಜಾಪ್ರಭುತ್ವ ವಿರೋಧಿ ಹಾಗೂ ರೈತರ ವಿರೋಧಿ ಕಾನೂನಿನ ಕುರಿತು ಭಾರತೀಯ ಜನತಾ ಪಕ್ಷ ಹಾಗೂ ಶಿರೋಮಣಿ ಅಕಾಲಿ ದಳ ಸಹಿತ ಅದರ ಮೈತ್ರಿಕೂಟವನ್ನು ತನ್ನ ಸರಕಾರ ನ್ಯಾಯಾಲಯಕ್ಕೆ ಎಳೆಯಲಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹೇಳಿದ್ದಾರೆ.

ಮಸೂದೆಯು ರಾಷ್ಟ್ರಪತಿಯಿಂದ ಅನುಮತಿ ಪಡೆದು ನೆಲದ ಕಾನೂನಾಗಿ ಪರಿವರ್ತಿತವಾಗುವ ಮೊದಲೇ ಮಸೂದೆಗಳ ವಿರುದ್ಧ ನ್ಯಾಯಾಂಗ ಹೋರಾಟವನ್ನು ನಡೆಸುತ್ತೇವೆ ಎಂದು ಸಿಂಗ್ ಹೇಳಿದರು.

  "ನಾವು ರೈತರೊಂದಿಗೆ ನಿಲ್ಲುತ್ತೇವೆ. ಅವರ ಹಿತಾಸಕ್ತಿಯನ್ನು ಕಾಪಾಡಲು ಏನೂ ಬೇಕಾದರೂ ಮಾಡುತ್ತೇವೆ. ಇಂತಹ ಕಾನೂನುಗಳು ರೈತರಿಗೆ ಏನು ಮಾಡುತ್ತವೆ ಎಂಬ ಕುರಿತು ಅವರಿಗೆ(ಬಿಜೆಪಿ ಹಾಗೂ ಮಿತ್ರಪಕ್ಷಗಳು)ಸ್ವಲ್ಪವೂ ಕಾಳಜಿಯೇ ಇಲ್ಲ.ಭಾರತದ ಕೃಷಿ ವಲಯದ ಬೆಳವಣಿಗೆಗೆ ಪ್ರಮುಖ ಕಾಣಿಕೆ ನೀಡುತ್ತಿರುವ ಪಂಜಾಬ್ ಸರಕಾರ ಸಹಿತ ಸಂಬಂಧಿತ ಯಾರನ್ನೂ ಕೇಂದ್ರ ಸರಕಾರ ಸಂಪರ್ಕ ಸಾಧಿಸಿಲ್ಲ'' ಎಂದು ಅಮರಿಂದರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News