ಅನ್‌ಲಾಕ್ 4: ದೇಶದ ಹಲವೆಡೆ ಶಾಲೆಗಳ ಭಾಗಶಃ ಪುನರಾರಂಭ

Update: 2020-09-21 07:33 GMT

ಹೊಸದಿಲ್ಲಿ, ಸೆ.21: ಕೊರೋನ ವೈರಸ್‌ನಿಂದಾಗಿ ಕಳೆದ ಆರು ತಿಂಗಳುಗಳಿಂದ ಮುಚ್ಚಲ್ಪಟ್ಟಿರುವ ದೇಶದ ಹಲವು ರಾಜ್ಯಗಳ ಶಾಲಾ-ಕಾಲೇಜುಗಳು ಇಂದಿನಿಂದ ಭಾಗಶಃ ಪುನರಾರಂಭವಾಗಿವೆ.

  ಕಳೆದ ತಿಂಗಳು ಬಿಡುಗಡೆಯಾಗಿರುವ ಕೇಂದ್ರ ಸರಕಾರದ ಅನ್‌ಲಾಕ್-4ರ ಮಾರ್ಗಸೂಚಿಯಲ್ಲಿ ಮಾರ್ಚ್‌ನಲ್ಲಿ ವಿಧಿಸಲಾಗಿರುವ ನಿರ್ಬಂಧಗಳನ್ನು ಮತ್ತಷ್ಟು ಸಡಿಲಿಸಲಾಗಿದ್ದು, ಕಂಟೋನ್ಮೆಂಟ್ ವಲಯಗಳಿಂದ ಹೊರಗಿರುವ ಪ್ರದೇಶದಲ್ಲಿರುವ 9 ರಿಂದ 12ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಶಾಲೆಗಳಿಗೆ ಸೆಪ್ಟಂಬರ್ 21ರಿಂದ ಸ್ವಯಂ ಪ್ರೇರಣೆಯಿಂದ ವಾಪಸಾಗಲು ಅನುಮತಿ ನೀಡಲಾಗಿದೆ.

 ದೇಶದ ಹಲವು ಭಾಗಗಳಲ್ಲಿ ಶಾಲೆಗಳು ಸೆ.21ರಂದು ಸ್ವಯಂ ಪ್ರೇರಣೆಯಿಂದ ಭಾಗಶಃ ತೆರೆದಿವೆ. ಮಾರ್ಚ್‌ನಲ್ಲಿ ಕೊರೋನ ವೈರಸ್‌ನಿಂದಾಗಿ ಶಾಲಾ-ಕಾಲೇಜುಗಳನ್ನು ಸಂಪೂರ್ಣ ಮುಚ್ಚಲಾಗಿತ್ತು. ಕೇಂದ್ರ ಆರೋಗ್ಯ ಸಚಿವಾಲಯ ಸೆ.8ರಂದು ಬಿಡುಗಡೆ ಮಾಡಿರುವ ಮಾರ್ಗಸೂಚಿಯ ಪ್ರಕಾರ ಕೇವಲ ಶೇ.50ರಷ್ಟು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳಿಗೆ ಕ್ಯಾಂಪಸ್‌ನೊಳಗೆ ಪ್ರವೇಶೀಸಲು ಅವಕಾಶ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯಗೊಳಿಸಲಾಗಿಲ್ಲ.

ದೇಶದ ನಾಲ್ಕು ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮಿರೆರಾಂ, ನಾಗಾಲ್ಯಾಂಡ್ ಹಾಗೂ ಮೇಘಾಲಯ, ಹರ್ಯಾಣ, ಹಿಮಾಚಲ ಪ್ರದೇಶ, ತಮಿಳುನಾಡು, ಮಧ್ಯಪ್ರದೇಶಗಳಲ್ಲಿ ಸುರಕ್ಷಿತ ಅಂತರದ ಶಿಷ್ಟಾಚಾರಗಳೊಂದಿಗೆ ಶಾಲೆ ಆರಂಭಿಸಲಾಗಿದೆ. ತ್ರಿಪುರಾ, ಅರುಣಾಚಲಪ್ರದೇಶ, ಹಾಗೂ ಮಣಿಪುರದಲ್ಲಿ ಶಾಲೆಗಳನ್ನು ತೆರೆಯಲಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News