×
Ad

ಕಾಸರಗೋಡು: ಮಳೆಯಬ್ಬರಕ್ಕೆ ಇಬ್ಬರು ಬಲಿ, 25ಕ್ಕೂ ಅಧಿಕ ಮನೆಗಳಿಗೆ ಹಾನಿ

Update: 2020-09-21 13:01 IST

ಕಾಸರಗೋಡು, ಸೆ.21: ಜಿಲ್ಲೆಯಲ್ಲಿ ಕಳೆದ 2-3 ದಿನಗಳಿಂದ ಸುರಿದ ಅಬ್ಬರದ ಮಳೆಗೆ ಇಬ್ಬರು ಬಲಿಯಾಗಿದ್ದಾರೆ. 25ಕ್ಕೂ ಅಧಿಕ ಮನೆಗಳು ಹಾನಿಗೊಂಡಿವೆ. 20ಕ್ಕೂ ಅಧಿಕ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಮಧೂರು ಚೇನಕ್ಕೋಡು ಎಂಬಲ್ಲಿ ಬಯಲಿನಲ್ಲಿ ನೀರು ತುಂಬಿದ್ದ ಹೊಂಡಕ್ಕೆ ಬಿದ್ದು ಚೆಂದ್ರಶೇಖರ(37) ಹಾಗೂ ಚೆರ್ವತ್ತೂರು ಮಯ್ಯಚ್ಚಿ ಎಂಬಲ್ಲಿ ಸುಧಾಕರ(50) ಎಂಬವರು ನೀರಿನ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾರೆ.

ಅಡ್ಕತ್ತಬೈಲ್ ಬೀಚ್ ಪರಿಸರದಲ್ಲಿ ಇಂದು ಬೆಳಗ್ಗೆ ಬೀಸಿದ ಸುಂಟರಗಾಳಿಗೆ 12ರಷ್ಟು ಮನೆಗಳು ಭಾಗಶಃ ಹಾನಿಗೀಡಾಗಿದೆ.  
ಮಧೂರು ಪಟ್ಲದಿಂದ ಮೂರು ಹಾಗೂ ಮೊಗರು ಪರಿಸರದಿಂದ ಏಳು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.

ಮಂಜೇಶ್ವರ ತಾಲೂಕಿನಲ್ಲಿ ಫೆಲಿಕ್ಸ್ ಡಿಸೋಜ ಎಂಬವರ ಮನೆ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ. ಕೊಡ್ಲಮೊಗರು ಎಂಬಲ್ಲಿ  ಅಬ್ದುಲ್ ಅಝೀಝ್ ಹಾಗೂ ಕುಂಬ್ಡಾಜೆ ಉಂಬ್ರಗಳದ ಲಕ್ಷ್ಮೀನಾರಾಯಣ ಭಟ್ ಎಂಬವರ ಮನೆ ಮೇಲೆ ಮರ ಉರುಳಿ ನಾಶ ನಷ್ಟ ಉಂಟಾಗಿದೆ. ವೆಳ್ಳರಿಕುಂಡು ಬಳಾಲ್ ಎಂಬಲ್ಲಿ 12 ಕುಟುಂಬ, ಕಳ್ಳಾರ್ ನಲ್ಲಿ ಮೂರು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.

ಮಧುವಾಹಿನಿ, ತೇಜಸ್ವಿನಿ ಹೊಳೆಗಳು ಉಕ್ಕಿ ಹರಿಯುತ್ತಿದೆ.  

ಪಿಲಿಕ್ಕೋಡು ನಲ್ಲಿ 60ರಷ್ಟು ಮನೆಗಳಿಗೆ ನೀರು ನುಗ್ಗಿದೆ. ಸೋಮವಾರ ಬೆಳಗ್ಗೆಯಿಂದ ಜಿಲ್ಲೆಯಲ್ಲಿ ಮಳೆಯ ಅಬ್ಬರ ಒಂದಿಷ್ಟು ಕಡಿಮೆಯಾಗಿದೆ.

ಜಿಲ್ಲೆಯಲ್ಲಿ ಇಂದು ಆರಂಜ್ ಅಲರ್ಟ್ ಘೋಷಿಸಲಾಗಿದ್ದು, ಬುಧವಾರ ತನಕ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News