ರಾಜ್ಯಸಭೆ ಕಲಾಪ ನಾಳೆಗೆ ಮುಂದೂಡಿಕೆ,ರಾಷ್ಟ್ರಪತಿ ಭೇಟಿಯಾಗಲು ವಿಪಕ್ಷಗಳ ಚಿಂತನೆ

Update: 2020-09-21 08:09 GMT

ಹೊಸದಿಲ್ಲಿ, ಸೆ.21: ಸಭಾಪತಿ ವೆಂಕಯ್ಯ ನಾಯ್ಡು ಅವರು ಎಂಟು ವಿಪಕ್ಷ ಸದಸ್ಯರುಗಳನ್ನು ಅಮಾನತುಗೊಳಿಸಿದ್ದನ್ನು ಖಂಡಿಸಿ ವಿರೋಧ ಪಕ್ಷಗಳು ವಿಪರೀತ ಗದ್ದಲ ಉಂಟು ಮಾಡಿದ ಹಿನ್ನೆಲೆಯಲ್ಲಿ ಸೋಮವಾರ ರಾಜ್ಯಸಭೆಯ ಕಲಾಪವನ್ನು ಐದು ಬಾರಿ ಮುಂದೂಡಲಾಗಿದ್ದು, ಅಂತಿಮವಾಗಿ ಮಂಗಳವಾರಕ್ಕೆ ಸದನವನ್ನು ಮುಂದೂಡಲಾಗಿದೆ.

ಹಲವು ಬಾರಿ ವಿನಂತಿಸಿದ ಹೊರತಾಗಿಯೂ ಅಮಾನತುಗೊಂಡಿರುವ ಸಂಸದರು ಸದನದಿಂದ ಹೊರ ನಡೆಯಲು ನಿರಾಕರಿಸಿದರು. ಹೀಗಾಗಿ ಸದನದ ಒಳಗೆ ಹಲವು ಪ್ರಕ್ರಿಯೆ ನಡೆಯಲಿಲ್ಲ. ಸದಸ್ಯರನ್ನು ಅಮಾನತುಗೊಳಿಸಿರುವ ಸಭಾಧ್ಯಕ್ಷರ ನಿರ್ಧಾರದ ಕುರಿತು ವಿಪಕ್ಷಗಳು ರಾಷ್ಟ್ರಪತಿ ರಾಮನಾಥ ಕೋವಿಂದ್‌ರನ್ನು ಭೇಟಿಯಾಗುವ ಯೋಜನೆಯನ್ನು ಹಾಕಿಕೊಂಡಿವೆ.

ರವಿವಾರ ರಾಜ್ಯಸಭೆಯಲ್ಲಿ ವಿವಾದಾತ್ಮಕ ಕೃಷಿ ಮಸೂದೆಗಳನ್ನು ಮಂಡಿಸುವ ವೇಳೆ ಭಾರೀ ಕೋಲಾಹಲ ಎಬ್ಬಿಸಿದ್ದ ವಿಪಕ್ಷದ 8 ಮಂದಿ ಸದಸ್ಯರನ್ನು ರಾಜ್ಯಸಭೆಯ ಉ್ಕಳಿದ ಕಾರ್ಯಕಲಾಪಗಳಿಂದ ಅಮಾನತುಗೊಳಿಸಲಾಗಿದೆ.  ಡೆರೆಕ್ ಒಬ್ರಿಯಾನ್, ಸಂಜಯ್ ಸಿಂಗ್, ರಾಜೀವ್ ಸಟವ್, ಕೆಕೆ ರಾಗೇಶ್, ರಿಪನ್ ಬೋರ, ಡೋಲಾ ಸೇನ್, ಸಯ್ಯದ್ ನಝೀರ್ ಹುಸೈನ್ ಹಾಗೂ ಇ.ಕರೀಮ್ ಅಮಾನತುಗೊಂಡ ಸದಸ್ಯರಾಗಿದ್ದಾರೆ.

ಅಮಾನತುಗೊಂಡಿರುವ 8 ಸದಸ್ಯರುಗಳು ಸದನದಿಂದ ಹೊರಹೋಗಲು ನಿರಾಕರಿಸಿದರು. ಅಮಾನತಗೊಂಡಿರುವ ಸದಸ್ಯರನ್ನು ಹೊರಹಾಕುವ ತನಕ ಕಲಾಪ ನಡೆಸುವುದಿಲ್ಲ ಎಂದು ಸರಕಾರ ತಿಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News