ಉಡುಪಿ : 873 ಮಂದಿಯನ್ನು ನೆರೆಯಿಂದ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

Update: 2020-09-21 10:56 GMT

ಉಡುಪಿ, ಸೆ. 21: ಶನಿವಾರ ಮಧ್ಯರಾತ್ರಿ ಸುಮಾರಿಗೆ ಉಡುಪಿ ನಗರದಲ್ಲಿ ನೆರೆಯ ಪ್ರಥಮ ವರದಿ ಬಂದಾಗ ತಕ್ಷಣವೇ ರಕ್ಷಣಾ ಕಾರ್ಯಾಚರಣೆಗಿಳಿದ ಉಡುಪಿಯ ಅಗ್ನಿಶಾಮಕ ದಳದ ಸಿಬ್ಬಂದಿಗಳು, ತಮ್ಮ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡದ ಸಹೋದ್ಯೋಗಿ ಗಳೊಂದಿಗೆ ಸೇರಿ ಸತತ 20 ಗಂಟೆಗಳ ಕಾಲ ಭಾರೀ ಮಳೆ-ಗಾಳಿ ಹಾಗೂ ಪ್ರತಿಕೂಲ ಪರಿಸ್ಥಿತಿಗಳನ್ನು ಲೆಕ್ಕಿಸದೇ ಸುಮಾರು 900 ಮಂದಿಯನ್ನು ರಕ್ಷಿಸುವ ಮೂಲಕ ಸಾಹಸ ಮೆರೆದಿದ್ದಾರೆ.

ಜಿಲ್ಲೆಯ ಇತಿಹಾಸದಲ್ಲಿ ಕಳೆದ ನಾಲ್ಕೈದು ದಶಕಗಳಲ್ಲೇ ಭೀಕರವಾಗಿ ಸುರಿದ ಮಳೆಯಿಂದ ಕರಾವಳಿ ತತ್ತರಿಸಿದಾಗ, ಅದಕ್ಕೆ ಸಾಂತ್ವನದ ಭರವಸೆಯನ್ನು ನೀಡುವಲ್ಲಿ ಎನ್‌ಡಿಆರ್‌ಎಫ್, ನೌಕಾಪಡೆ, ಕರಾವಳಿ ಕಾವಲು ಪಡೆಗಳೊಂದಿಗೆ ಶ್ರಮಿಸಿದ ತಂಡಗಳಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಅತೀ ಹೆಚ್ಚು ಜನರನ್ನು ರಕ್ಷಿಸಿರುವುದು ಅಚ್ಚರಿಯೇನಲ್ಲ.

ಆರಂಭದಲ್ಲಿ ಉಡುಪಿಯ ಅಗ್ನಿಶಾಮಕ ದಳದ ಸಿಬ್ಬಂದಿಗಳೆ ಹೆಚ್ಚಿನೆಲ್ಲಾ ರಕ್ಷಣಾ ಹಾಗೂ ಪರಿಹಾರ ಕಾರ್ಯದಲ್ಲಿ ಭಾಗಿಯಾಗಿದ್ದರೆ, ಬಳಿಕ ಅವರನ್ನು ಸೇರಿಕೊಂಡವರು ಕುಂದಾಪುರ, ಮಲ್ಪೆ ಅಗ್ನಿಶಾಮಕ ದಳದವರು. ಇವರೊಂದಿಗೆ ರವಿವಾರ ಮುಂಜಾನೆಯಿಂದ ಕೈಜೋಡಿಸಿದವರು ಕಾರ್ಕಳ, ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆ, ಪಾಂಡೇಶ್ವರ ಹಾಗೂ ಉತ್ತರ ಕನ್ನಡದ ಭಟ್ಕಳ ಅಗ್ನಿಶಾಮಕ ದಳದ ಸಿಬ್ಬಂದಿಗಳು. ಶನಿವಾರ ಮಧ್ಯರಾತ್ರಿ 10:50ರ ಸುಮಾರಿಗೆ ಫೀಲ್ಡ್‌ಗೆ ಇಳಿದವರು, ರವಿವಾರ ಸಂಜೆ 5:00ಗಂಟೆಯವರೆಗೂ ನಿರಂತರವಾಗಿ ಜನರನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಲು ಹೆಣಗಾಡಿದರು.

ಶನಿವಾರ ರಾತ್ರಿ 10:20ಕ್ಕೆ ನಾಯರ್‌ಕೆರೆ ಹಾಗೂ ಬ್ರಹ್ಮಗಿರಿಯಲ್ಲಿ ನೆರೆ ನೀರು ಮನೆಗಳಿಗೆ ನುಗ್ಗಿದ ಮೊದಲ ಕರೆ ಬಂದಿದ್ದು, ತಕ್ಷಣ ಸ್ಥಳಕ್ಕೆ ಧಾವಿಸಿ ಬಂದ ಉಡುಪಿ ಅಗ್ನಿಶಾಮಕ ದಳ ಸಿಬ್ಬಂದಿಗಳು ಈ ಪರಿಸರದ ಮೂರು ಮನೆಗಳಲ್ಲಿ ದ್ದವರನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸಿದರು.

ಇದೇ ಸಮಯದಲ್ಲಿ ಕಲ್ಸಂಕದ ನೀರು ಅಪಾಯಕಾರಿಯಾಗಿ ಏರುತ್ತಿರುವ ಬಗ್ಗೆ ದೊರೆತ ಮಾಹಿತಿಯಂತೆ ಕೃಷ್ಣ ಮಠ, ಗುಂಡಿಬೈಲು ಪರಿಸರದಲ್ಲಿ ಅಪಾಯಕ್ಕೆ ಸಿಲುಕಿದ್ದ 150 ಮಂದಿಯನ್ನು ರಕ್ಷಿಸುವಾಗ ಮಧ್ಯರಾತ್ರಿ ಸಮೀಪಿಸಿತ್ತು. ನಂತರ ಕಪ್ಪೆಟ್ಟು ಬಳಿ ಮೂವರನ್ನು ದೋಣಿ ಬಳಸಿ ರಕ್ಷಿಸಿ ದರೆ, ಬೈಲೂರು ಮಹಿಷಮರ್ಧಿನಿ ದೇವಸ್ಥಾನದ ಬಳಿ ನೆರೆಗೆ ಸಿಲುಕಿದ್ದ 10 ಮಂದಿಯನ್ನು ಸುರಕ್ಷಿತ ಜಾಗಕ್ಕೆ ತಲುಪಿಸಲಾಯಿತು.

ಬಳಿಕ ಇದೇ ತಂಡಗಳು ಮಧ್ಯರಾತ್ರಿಯ ಬಳಿಕ ಪಣಿಯೂರಿನಲ್ಲಿ 8, ಕಿದಿಯೂರಿನಲ್ಲಿ 5, ಆಚಾರ್‌ಕಟ್ಟೆ ಪರಿಸರದಲ್ಲಿ 25, ಬಿಕರ್ನಕಟ್ಟೆ ಪರಿಸರ ದಲ್ಲಿ 80 ಮಂದಿಯನ್ನು ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರು.

ರವಿವಾರ 11 ಗಂಟೆ ಸುಮಾರಿಗೆ ಉಡುಪಿ ಅಗ್ನಿಶಾಮಕ ದಳ ತಂಡ ಹಾಗೂ ಎನ್‌ಡಿಆರ್‌ಎಫ್ ತಂಡ ಹಿರಿಯಡ್ಕ ಬಜೆ ಅಣೆಕಟ್ಟು ಸಮೀಪ ಉಕ್ಕೇರಿ ಹರಿದ ಸ್ವರ್ಣ ನದಿಯ ನೆರೆಯಿಂದ ಐದು ಮಂದಿಯನ್ನು ರಕ್ಷಿಸಿತ್ತು. ಇನ್ನೊಂದು ತಂಡ ಕುಂಜಿಬೆಟ್ಟುನಲ್ಲಿ 15 ಮಂದಿಯನ್ನು, ಮೂಡಬಿದರೆಯ ತಂಡ ಬೆಳ್ಮಣ್‌ನ ಮುಂಡ್ಕೂರಿನಲ್ಲಿ ನೆರೆಯಲ್ಲಿ ಸಿಲುಕಿದವರನ್ನು ರಕ್ಷಿಸಿತ್ತು.

ಕುಂದಾಪುರ ಅಗ್ನಿಶಾಮಕ ದಳ ತಂಡ ಬ್ರಹ್ಮಾವರ ತಾಲೂಕಿನ ಕೆ.ಜಿ.ರೋಡ್, ಹಾವಂಜೆ, ದೇವಸ್ಥಾನಬೆಟ್ಟು, ಉಪ್ಪೂರು ಉಗ್ಗೇಲ್‌ಬೆಟ್ಟು ಪರಿಸರದಲ್ಲಿ ಸ್ವರ್ಣ ನದಿ ಹಾಗೂ ಮಡಿಸಾಲು ಹೊಳೆಯಿಂದ ಉಂಟಾದ ನೆರೆಗೆ ಸಿಲುಕಿದ್ದ 80ಕ್ಕೂ ಅಧಿಕ ಬೆಳಗಿನ ಜಾವ 4:30ರ ಸುಮಾರಿಗೆ ರಕ್ಷಿಸಿ ಸುರಕ್ಷಿತ ಸ್ಥಳ ತಲುಪಿಸಿತ್ತು.

ಇನ್ನು ಕಾರ್ಕಳ ಅಗ್ನಿಶಾಮಕ ದಳ ತಂಡ ನೆಲ್ಲಿಕಟ್ಟೆ, ಹಿರ್ಗಾನ, ಸೂಡ, ಬೆಳ್ಣಣ್, ಇನ್ನಾ, ತೆಳ್ಳಾರು, ಮದಬೆಟ್ಟು ಪರಿಸರದ 35 ಮಂದಿಯನ್ನು ಬೆಳಗ್ಗೆ 10 ಗಂಟೆ ಸುಮಾರಿಗೆ ರಕ್ಷಿಸಿತ್ತು.

ಮಲ್ಪೆ ಅಗ್ನಿಶಾಮಕ ದಳ ತಂಡ ಬನ್ನಂಜೆ ಮಂಜುನಾಥ ಆಸ್ಪತ್ರೆ, ಗುಂಡಿಬೈಲು, ಪಾಡಿಗಾರು, ಬೀಡಿನಗುಡ್ಡೆ ಹಾಗೂ ಬಲಾಯಿಪಾದೆಗಳಲ್ಲಿ ಸುಮಾರು 40 ಜನರನ್ನು ರಕ್ಷಿಸಿತು. ಮಲ್ಪೆ ತಂಡ ಮೂಡುನಿಡಂಬೂರು ಶನೀಶ್ವರ ದೇವಸ್ಥಾನದ ಬಳಿ ಸುಮಾರು 160 ಮಂದಿಯನ್ನು ಬೋಟು ಗಳಲ್ಲಿ ರಕ್ಷಿಸಿದರೆ, ಭಟ್ಕಳ ಅಗ್ನಿಶಾಮಕ ದಳ ತಂಡವೊಂದು ಉಪ್ಪೂರು ಜಾತಬೆಟ್ಟುನಲ್ಲಿ ಮಡಿಸಾಲು ಹೊಳೆಯ ನೆರೆಗೆ ಸಿಲುಕಿದ್ದ 200 ಮಂದಿಯನ್ನು ಅವರವರ ಮನೆಗಳಿಂದ ರಕ್ಷಿಸಿತ್ತು.

ಇನ್ನು ಉಡುಪಿ ತಂಡ ಉದ್ಯಾವರ ಪಿತ್ರೋಡಿಯಲ್ಲಿ 50 ಮಂದಿಯನ್ನು, ಮಂಗಳೂರು ಪಾಂಡೇಶ್ವರ ಅಗ್ನಿಶಾಮಕ ದಳ ತಂಡ ಕಾಪು ತಾಲೂಕು ಪಾಂಗಾಳ, ಇನ್ನಾ ಮತ್ತು ಕೊಲ್ತಬೆಟ್ಟುಗಳಲ್ಲಿ ನೆರೆಗೆ ಸಿಲುಕಿದ್ದ ತಂಡವನ್ನು ರಕ್ಷಿಸಿದರೆ, ಮೂಡಬಿದರೆ ತಂಡ ಉದ್ಯಾವರದ ಜಯಲಕ್ಷ್ಮೀ ಅಂಗಡಿ ಆಸುಪಾಸಿನ ಸುಮಾರು ಹತ್ತು ಮಂದಿಯನ್ನು ರಕ್ಷಿಸಿತ್ತು.

ಉಡುಪಿ ಜಿಲ್ಲೆಯಲ್ಲಿ ಶನಿವಾರದಿಂದ ರವಿವಾರ ಸಂಜೆಯವರೆಗೆ ಒಟ್ಟು ನೆರೆ ಬಾಧಿತ 77 ಗ್ರಾಮಗಳಲ್ಲಿ 785 ಕುಟುಂಬಗಳ 2874 ಮಂದಿ ಯನ್ನು ನೆರೆಯಿಂದ ರಕ್ಷಿಸಲಾಗಿತ್ತು. ಜಿಲ್ಲೆಯಲ್ಲಿ ಒಟ್ಟು 1107 ಮನೆಗಳು ನೆರೆಗೆ ಸಿಲುಕಿದ್ದವು ಎಂದು ಜಿಲ್ಲಾಡಳಿತ ನೀಡಿದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News