ಅರೆಭಾಷೆಯಲ್ಲಿ ಮೊದಲ ಛಂದೋಬದ್ಧ ಯಕ್ಷಗಾನ ಪ್ರಸಂಗ ಸಿದ್ಧ

Update: 2020-09-21 11:53 GMT

ಮಂಗಳೂರು, ಸೆ.21: ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಪ್ರಾದೇಶಿಕ ಉಪಭಾಷೆಯಾದ ಅರೆಭಾಷೆಯಲ್ಲಿ ಇದೇ ಮೊದಲ ಬಾರಿಗೆ ಛಂದೋಬದ್ಧ ಯಕ್ಷಗಾನ ಪ್ರಸಂಗ ರಚನೆಗೊಂಡಿದ್ದು, ತಾಳಮದ್ದಳೆಯ ಮೊದಲ ಪ್ರಯೋಗ ಯಶಸ್ವಿಯಾಗಿದೆ. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವಿನಂತಿ ಮೇರೆಗೆ ಯಕ್ಷಗಾನ ಯುವ ಭಾಗವತರಾದ ಭವ್ಯಶ್ರೀ ಕುಲ್ಕುಂದ ಅರೆಭಾಷೆಯಲ್ಲಿ ಯಕ್ಷಗಾನ ಪ್ರಸಂಗ ರಚಿಸಿದ್ದಾರೆ.

ಅರೆಭಾಷೆಯಲ್ಲಿ ಯಕ್ಷಗಾನ, ತಾಳಮದ್ದಳೆ ಪ್ರಯೋಗ ಈಗಾಗಲೇ ನಡೆದಿದೆ. ಆದರೆ, ಪ್ರಸಂಗ ಸಾಹಿತ್ಯ ಕನ್ನಡದಲ್ಲಿದೆ. ಅರೆಭಾಷೆಯಲ್ಲೇ ಪ್ರಸಂಗ ಸಾಹಿತ್ಯವೂ ದೊರೆಯಬೇಕು ಎಂಬ ಅಕಾಡೆಮಿಯ ಯೋಜನೆಯಂತೆ ಭವ್ಯಶ್ರೀ ಅವರು ಕನ್ನಡದಿಂದ ಐದು ಪ್ರಸಂಗಗಳನ್ನು ಅರೆಭಾಷೆಗೆ ಅನುವಾದಿಸುತ್ತಿದ್ದಾರೆ. ಈಗಾಗಲೇ ಶರಸೇತು ಬಂಧನ ಮತ್ತು ಪಂಚವಟಿ ಪ್ರಸಂಗದ ಅನುವಾದ ಪೂರ್ಣಗೊಂಡಿದೆ. ಈ ಪೈಕಿ ಶರಸೇತು ಬಂಧನ ಪ್ರಸಂಗ ‘ಬಾಣದ ಪಾಲ’ ಹೆಸರಿನಲ್ಲಿ ತಾಳಮದ್ದಳೆ ವಿಡಿಯೊ, ಆಡಿಯೊ ರೆಕಾರ್ಡಿಂಗ್ ನಡೆದಿದೆ.

‘ಅರೆಭಾಷೆಯಲ್ಲಿ ಯಕ್ಷಗಾನ ಪ್ರಸಂಗ ರಚಿಸಬೇಕು ಎಂಬ ಪ್ರಯತ್ನಕ್ಕೆ ಮುಂದಾದಾಗ ಬರೆಯುವವರು ಯಾರು ಎಂಬ ಪ್ರಶ್ನೆ ಎದುರಾಯಿತು. ಈಗಾಗಲೇ ಛಂದೋಬದ್ದವಾಗಿ ಕನ್ನಡ ಪದ್ಯ ರಚನೆಯ ಪ್ರಯತ್ನ ನಡೆಸುತ್ತಿರುವ ಭಾಗವತರಾದ ಭವ್ಯಶ್ರೀ ಅವರ ಬಗ್ಗೆ ತಿಳಿದು, ಅವರನ್ನು ಸಂಪರ್ಕಿಸಿ ಅರೆಭಾಷೆಗೆ ಯಕ್ಷಗಾನ ಪ್ರಸಂಗವನ್ನು ಅನುವಾದಿಸಲು ವಿನಂತಿಸಲಾಯಿತು. ಯಕ್ಷಗಾನ ಪ್ರದರ್ಶನಕ್ಕೆ ಹೊಂದಿಕೆಯಾಗುವ ಮೂರು ಪ್ರಸಂಗ ಹಾಗೂ ತಾಳಮದ್ದಳೆಗೆ ಎರಡು ಪ್ರಸಂಗ ರಚನೆಗೆ ಮನವಿ ಮಾಡಲಾಗಿತ್ತು. ಮುಂದಿನ ದಿನಗಳಲ್ಲಿ ಐದು ಪ್ರಸಂಗಗಳು ಅರೆಭಾಷೆಯಲ್ಲಿ ಲಭ್ಯವಾಗಲಿವೆ. ಇದು ಭಾಷೆಯ ಬೆಳವಣಿಗೆಗೆ ಪೂರಕವಾಗಲಿದೆ ಎಂದು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ತಿಳಿಸಿದ್ದಾರೆ.

ಶರಸೇತು ಬಂಧನ ಪ್ರಸಂಗ ಅರೆಭಾಷೆಯಲ್ಲಿ ‘ಬಾಣದ ಪಾಲ’ ಹೆಸರಿನಲ್ಲಿ ತಾಳಮದ್ದಳೆಯಾಗಿ ಈಗಾಗಲೇ ರೆಕಾರ್ಡಿಂಗ್ ಆಗಿದೆ. ಭಾಗವತಿಕೆಯಲ್ಲಿ ಭವ್ಯಶ್ರೀ ಕುಲ್ಕುಂದ, ಚೆಂಡೆಯಲ್ಲಿ ಮುರಾರಿ ಕಡಂಬಳಿತ್ತಾಯ, ಮದ್ದಳೆಯಲ್ಲಿ ಅಕ್ಷಯ್ ರಾವ್ ವಿಟ್ಲ, ಅರ್ಥಧಾರಿಗಳಾಗಿ ಕೊಳ್ತಿಗೆ ನಾರಾಯಣ ಗೌಡ, ಜಬ್ಬಾರ್ ಸಮೊ ಸಂಪಾಜೆ, ಜಯಾನಂದ ಸಂಪಾಜೆ ಭಾಗವಹಿಸಿದ್ದಾರೆ.

ಅರೆಭಾಷೆಯಲ್ಲಿ ಯಕ್ಷಗಾನ ಪ್ರಸಂಗ ರಚಿಸುವ ಬಗ್ಗೆ ಅಕಾಡೆಮಿ ತಜ್ಞರ ಸಲಹೆ ಪಡೆದು ಪ್ರಯತ್ನ ಆರಂಭಿಸಿತು. ಇದೀಗ ಎರಡು ಪ್ರಸಂಗ ರಚನೆಗೊಂಡಿದೆ. ರೆಕಾರ್ಡಿಂಗ್ ಆದ ತಾಳಮದ್ದಳೆಯನ್ನು ಸದ್ಯದಲ್ಲೇ ಅಕಾಡೆಮಿಯ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗುವುದು. ಮುಂದಕ್ಕೆ ಐದು ಪ್ರಸಂಗಗಳು ಅರೆಭಾಷೆಯಲ್ಲಿ ಲಭ್ಯವಾಗಲಿವೆ.

- ಲಕ್ಷ್ಮೀನಾರಾಯಣ ಕಜೆಗದ್ದೆ, ಅಧ್ಯಕ್ಷರು, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ.

ಅರೆಭಾಷೆಯಲ್ಲಿ ಅರ್ಧಪದಗಳ ಬಳಕೆ ಹೆಚ್ಚು. ಇದನ್ನು ಛಂದಸ್ಸಿಗೆ ಹೊಂದಿಸುವುದು ಸವಾಲಿನ ಕೆಲಸ. ಲಾಕ್‌ಡೌನ್ ಅವಧಿಯಲ್ಲಿ ಪ್ರಸಂಗ ಅನುವಾದ ಆರಂಭಿಸಿದೆ. ಅಕಾಡೆಮಿ ನೇತೃತ್ವದಲ್ಲಿ ಹೊಸ ಪ್ರಯೋಗಕ್ಕೆ ಕೈಜೋಡಿಸಿದ ಖುಷಿ ಇದೆ. ಪದ್ಯ ರಚನೆ ಸಂದರ್ಭ ನನ್ನ ಮೊದಲ ಗುರುಗಳಾದ ವಿಶ್ವವಿನೋದ ಬನಾರಿ ಅವರು ಪ್ರೋತ್ಸಾಹ ನೀಡಿದ್ದಾರೆ. ಗುರುಗಳಾದ ಗಣೇಶ ಕೊಲೆಕಾಡಿ ಅವರು ಛಂದಸ್ಸಿನ ಬಗ್ಗೆ ಮಾರ್ಗ ದರ್ಶನ ನೀಡಿದ್ದಾರೆ. ಭಾಗವತರಾದ ಸುಬ್ರಾಯ ಸಂಪಾಜೆ ಭಾಷೆ ಬಗ್ಗೆ ಸಲಹೆ, ಮಾರ್ಗದರ್ಶನ ನೀಡಿದ್ದಾರೆ. ಅಕಾಡೆಮಿ ಅಧ್ಯಕ್ಷ ಲಕ್ಷ್ಮೀ ನಾರಾಯಣ ಕಜೆಗದ್ದೆ, ಸರ್ವ ಸದಸ್ಯರು, ಜಬ್ಬಾರ್ ಸಮೊ ಅವರು ಪ್ರೋತ್ಸಾಹ ನೀಡಿದ್ದಾರೆ.

ಭವ್ಯಶ್ರೀ ಕುಲ್ಕುಂದ, ಯಕ್ಷಗಾನ ಭಾಗವತರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News