ಗುಡ್ಡ ಕುಸಿತ : ಮಾಳ-ಕುದುರೆಮುಖ ರಾ.ಹೆ.169ರಲ್ಲಿ ವಾಹನ ಸಂಚಾರ ಬಂದ್

Update: 2020-09-21 13:46 GMT

ಉಡುಪಿ, ಸೆ.21: ಕಾರ್ಕಳ ತಾಲೂಕಿನಾದ್ಯಂತ ಕಳೆದೆರಡು ದಿನಗಳಿಂದ ವಿಪರೀತ ಮಳೆ ಸುರಿಯುತ್ತಿರುವುದರಿಂದ ಕಾರ್ಕಳ ತಾಲೂಕು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಾಳ-ಕುದುರೆಮುಖ ರಾಷ್ಟ್ರೀಯ ಹೆದ್ದಾರಿ- 169ರಲ್ಲಿ ವಾಹನ ಸಂಚಾರವನ್ನು ಸೋಮವಾರ ಮತ್ತು ಮಂಗಳವಾರ ಎರಡು ದಿನಗಳ ಕಾಲ ನಿಷೇಧಿಸಿ ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶ ಹೊರಡಿಸಿದ್ದಾರೆ.

ಮಾಳ-ಕುದುರೆಮುಖ ರಾ.ಹೆ.169ರಲ್ಲಿ ಗುಡ್ಡ ಕುಸಿತ ಉಂಟಾಗಿ ಮಣ್ಣು ರಸ್ತೆಗೆ ಬೀಳುತಿರುವುದರಲ್ಲದೇ, ರಸ್ತೆ ಸಮೀಪವಿರುವ ಬೃಹತ್ ಗಾತ್ರದ ಮರಗಳು ರಸ್ತೆಗೆ ಉರುಳಿ ಬೀಳುತಿದೆ. ಸೆ.19ರಂದು ಈ ರಸ್ತೆಯಲ್ಲಿ ಸಾಗುತಿದ್ದ ವಾಹನವೊಂದರ ಮೇಲೆ ಮರಬಿದ್ದು ವಾಹನ ಜಖಂಗೊಂಡಿ ದ್ದರೂ ಯಾವುದೇ ಸಾವು-ನೋವು ಸಂಭವಿಸಿಲ್ಲ.

ಈಗಾಗಲೇ ನಾಲ್ಕು ಮರಗಳು ರಸ್ತೆಗೆ ಬಿದ್ದಿದ್ದು, ವಿಪರೀತ ಮಳೆಯಿಂದ ಇನ್ನಷ್ಟು ಮರಗಳು ರಸ್ತೆಗೆ ಬೀಳುವ ಸಂಭವವಿದೆ. ಇದರಿಂದ ಪ್ರಾಣ ಹಾನಿ ಸಂಭವವೂ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ, ಸಾರ್ವಜನಿಕ ಹಿತದೃಷ್ಟಿಯಿಂದ ಮಾಳ-ಕುದುರೆಮುಖ ರಾ.ಹೆದ್ದಾರಿ 169ರಲ್ಲಿ ಎರಡು ದಿನಗಳಕಾಲ ವಾಹನ ಸಂಚಾರಕ್ಕೆ ನಿಷೇಧಿ ವಿಧಿಸಿ ಆದೇಶ ಹೊರಡಿಸಲಾಗಿದೆ.

ಪ್ರಾಕೃತಿಕ ವಿಕೋಪ ನಿರ್ವಹಣೆ ಕಾಯ್ದೆ 2005ರ ನಿಯಮ 34ರನ್ವಯ ಅಧಿಕಾರವನ್ನು ಚಲಾಯಿಸಿ ಮಾಳ-ಕುದುರೆಮುಖ ರಸ್ತೆಯಲ್ಲಿ ಸೆ.21 ಮತ್ತು 22ರಂದು ವಾಹನ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News