ಉ.ಪ್ರ: ವಿಮಾನ ಅಪಘಾತದಲ್ಲಿ ಟ್ರೈನಿ ಪೈಲಟ್ ಸಾವು
Update: 2020-09-21 19:31 IST
ಲಕ್ನೊ, ಸೆ.21: ಉತ್ತರಪ್ರದೇಶದ ಅಝಮ್‌ಗಢದಲ್ಲಿ ಸೋಮವಾರ ಸಂಭವಿಸಿದ ವಿಮಾನ ಅಪಘಾತದಲ್ಲಿ 21 ವರ್ಷದ ಶಿಕ್ಷಾರ್ಥಿ (ಟ್ರೈನಿ) ಪೈಲಟ್ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಕೆಟ್ಟ ಹವಾಮಾನ ದುರಂತಕ್ಕೆ ಕಾರಣ ಎಂದು ಊಹಿಸಲಾಗಿದೆ. ನಾಲ್ಕು ಸೀಟಿನ ಸಣ್ಣ ವಿಮಾನ ಹಾರಾಟದಲ್ಲಿ ತರಬೇತಿ ಪಡೆಯುತ್ತಿದ್ದ ಸಂದರ್ಭ ಗದ್ದೆಗೆ ಪತನವಾಗಿದ್ದು ಹರ್ಯಾಣ ಮೂಲದ ಕೊನ್ಕಾರ್ಕ್ ಸರಣ್ ಮೃತಪಟ್ಟಿದ್ದಾರೆ. ಅಮೇಠಿಯ ಇಂದಿರಾಗಾಂಧಿ ರಾಷ್ಟ್ರೀಯ ಉಡ್ಡಯನ ಅಕಾಡಮಿಯಲ್ಲಿ ಈ ಪೈಲಟ್ ತರಬೇತಿ ಪಡೆಯುತ್ತಿದ್ದರು. ಸರಣ್ ಶಿಕ್ಷಾರ್ಥಿ ಪೈಲಟ್ ಆಗಿ 125 ಗಂಟೆಗೂ ಹೆಚ್ಚಿನ ವಿಮಾನ ಹಾರಾಟದ ಅನುಭವ ಹೊಂದಿದ್ದರು. ಚಂಡಮಾರುತದಿಂದ ಉಂಟಾದ ಕಪ್ಪು ಮೋಡದಿಂದ ಅಪಘಾತ ಸಂಭವಿಸಿರುವ ಸಾಧ್ಯತೆಯಿದೆ ಎಂದು ಅಝಮ್‌ಗಢ ಜಿಲ್ಲಾಧಿಕಾರಿ ಹೇಳಿದ್ದಾರೆ. ಅಝಮ್‌ಗಢ ಜಿಲ್ಲಾಡಳಿತ ಮತ್ತು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.