ಸೋಮವಾರವೂ ವಾಡಿಕೆಗಿಂತ 101ಮಿ.ಮೀ ಅಧಿಕ ಮಳೆ: ಉಡುಪಿ ಜಿಲ್ಲೆಯಲ್ಲಿ ಒಟ್ಟು 67 ಮನೆಗಳಿಗೆ ಹಾನಿ

Update: 2020-09-21 14:09 GMT

ಉಡುಪಿ, ಸೆ.21: ಉಡುಪಿ ಜಿಲ್ಲೆಯಾದ್ಯಂತ ರವಿವಾರ ಬೆಳಗ್ಗೆ 8:30ರಿಂದ ಸೋಮವಾರ ಬೆಳಗ್ಗೆ 8:30ರವರೆಗೆ 24 ಗಂಟೆಗಳ ಅವಧಿಯಲ್ಲಿ ವಾಡಿಕೆ ಮಳೆಗಿಂತ 101ಮಿ.ಮೀ. (10.1ಸೆ.ಮಿ) ಅಧಿಕ ಮಳೆ ಸುರಿದಿದೆ.

ಸೆ.21ರಂದು ಜಿಲ್ಲೆಯ ವಾಡಿಕೆ ಮಳೆ 10ಮಿ.ಮೀ. ಆಗಿದೆ. ಆದರೆ ಜಿಲ್ಲೆಯ ಏಳು ತಾಲೂಕುಗಳಲ್ಲಿ ಇಂದು ಸುರಿದಿದ್ದು 111ಮಿ.ಮೀ. ಮಳೆಯಾ ಗಿದೆ. ಅಂದರೆ ದಿನದಲ್ಲಿ ವಾಡಿಕೆಗಿಂತ 101 ಮಿ.ಮೀ. ಮಳೆ ಅಧಿಕ ಸುರಿದಿದೆ.

ಉಡುಪಿ ತಾಲೂಕಿನಲ್ಲಿ ಇಂದಿನ ವಾಡಿಕೆ ಮಳೆ 10ಮಿ.ಮೀ.,ಆದರೆ ಸುರಿದಿರುವುದು 87ಮಿ.ಮೀ. ಮಳೆ. ಅಂದರೆ ವಾಡಿಕೆಗಿಂತ 77ಮಿ.ಮೀ. ಅಧಿಕ ಮಳೆ. ಅದೇ ರೀತಿ ಕುಂದಾಪುರ ತಾಲೂಕಿನಲ್ಲಿ ವಾಡಿಕೆ 7ಮಿ.ಮೀ. ಇಂದು ಬಂದಿರುವುದು 124 ಮಿ.ಮೀ. ಅಧಿಕ 117ಮಿ.ಮೀ., ಕಾರ್ಕಳದಲ್ಲಿ 12-124-112, ಬ್ರಹ್ಮಾವರದಲ್ಲಿ 06-102-96,ಬೈಂದೂರಿನಲ್ಲಿ 12-144-122, ಕಾಪು ತಾಲೂಕಿನಲ್ಲಿ 07-102-95, ಹೆಬ್ರಿ ತಾಲೂಕಿನಲ್ಲಿ 14-97-83ಮಿ.ಮೀ. ಮಳೆಯಾಗಿದೆ.

ನೆರೆ ನೀರು ಇಳಿತ: ಕಳೆದ ಮೂರು ದಿನಗಳ ಮಳೆಯಿಂದಾದ ನೆರೆ ನೀರಿನ ಪ್ರಮಾಣ ಇಂದು ತಗ್ಗಿದೆ. ಜಿಲ್ಲೆಯ ಒಟ್ಟು ಏಳು ಕಡೆಗಳಲ್ಲಿ ಮಾತ್ರ ಕಾಳಜಿ ಕೇಂದ್ರ ಕಾರ್ಯಾಚರಿಸುತಿದ್ದು, ಒಟ್ಟು 137 ಮಂದಿ ಇನ್ನೂ ಇದರಲ್ಲಿ ಆಶ್ರಯ ಪಡೆದಿದ್ದಾರೆ. ಒಟ್ಟು 1064 ಮಂದಿ ತಮ್ಮ ಪ್ರದೇಶದಲ್ಲಿ ನೆರೆ ನೀರು ಇಳಿದಿರುವುದರಿಂದ ಮನೆಗಳಿಗೆ ತೆರಳಿದ್ದಾರೆ.

ಉಡುಪಿ ತಾಲೂಕಿನಲ್ಲಿ 2 ಕೇಂದ್ರಗಳಲ್ಲಿ 65 ಮಂದಿ (30 ಪುರುಷರು, 35 ಮಹಿಳೆಯರು), ಬ್ರಹ್ಮಾವರದ 3 ಕೇಂದ್ರಗಳಲ್ಲಿ 26 (10-16), ಕಾಪುವಿನ 2 ಕೇಂದ್ರಗಳಲ್ಲಿ 46 (22-24) ಮಂದಿ ಉಳಿದುಕೊಂಡಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 67 ಮನೆಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿದೆ. ಇವುಗಳಲ್ಲಿ ಉಡುಪಿ-36, ಕುಂದಾಪುರ-6, ಬ್ರಹ್ಮಾವರ-8, ಕಾಪು-14, ಕಾರ್ಕಳ-3 ಮನೆಗಳಿಗೆ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ನಿಯಂತ್ರಣ ಕೇಂದ್ರ ತಿಳಿಸಿದೆ.

ಸಹಜ ಸ್ಥಿತಿಯತ್ತ ಜನಜೀವ: ಜಿಲ್ಲೆಯ ಇತಿಹಾಸದ ಅಭೂತಪೂರ್ವ ಜಲಪ್ರಳಯದಿಂದ ಅಸ್ತವ್ಯಸ್ತಗೊಂಡಿದ್ದ ಜನಜೀವನ ಇಂದು ನಿಧಾನವಾಗಿ ಸಹಜ ಸ್ಥಿತಿಗೆ ಬರುತ್ತಿದೆ. ನೆರೆ ಪೀಡಿತವಾಗಿದ್ದ ನಾಲ್ಕು ತಾಲೂಕುಗಳ ಹೆಚ್ಚಿನ ಗ್ರಾಮಗಳ ನೆರೆ ನೀರು ಇಳಿಮುಖವಾಗಿದೆ. ಜನರು ತಮ್ಮ ಮನೆ ಗಳಿಗೆ ಮರಳಿ, ನೆರೆ ನೀರು ನುಗ್ಗಿ ಕೆಸರುಮಯವಾದ ಮನೆಯನ್ನು ಸಹಜ ಸ್ಥಿತಿಗೆ ತರುವ ಪ್ರಯತ್ನದಲ್ಲಿ ತೊಡಗಿದ್ದಾರೆ.

ಜಿಲ್ಲೆಯ ಹೆಚ್ಚಿನೆಲ್ಲಾ ನದಿಗಳ ನೀರು ಇಳಿದು ನೆಲಮಟ್ಟಕ್ಕೆ ಸಮನಾಗಿ ಹರಿಯುತ್ತಿದೆ. ಜಲಾವೃತಗೊಂಡಿದ್ದ ಗದ್ದೆ, ಬಯಲು, ತೋಟಗಳ ನೀರು ಸಹ ಹರಿದುಹೋಗಿದ್ದು, ನೆರೆ ನೀರು ತಂದು ಹಾಕಿದ ಕೆಸರು, ಮಣ್ಣು ಅಲ್ಲೀಗ ಗೋಚರಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News