ದ.ಕ.ಜಿಲ್ಲೆ: ಕೋವಿಡ್‌ಗೆ ಎಂಟು ಬಲಿ, 233 ಮಂದಿಗೆ ಕೊರೋನ ಸೋಂಕು

Update: 2020-09-21 14:26 GMT

ಮಂಗಳೂರು, ಸೆ.21: ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿನಿಂದಾಗಿ ಎಂಟು ಮಂದಿ ಮೃತಪಟ್ಟಿದ್ದಾರೆ. ಈ ನಡುವೆ ಸೋಮವಾರ 233 ಮಂದಿಗೆ ಸೋಂಕು ತಗುಲಿದೆ.

ಮೃತರ ಪೈಕಿ ಮಂಗಳೂರು ತಾಲೂಕಿನ ಐವರು, ಬೆಳ್ತಂಗಡಿ, ಸುಳ್ಯ ಹಾಗೂ ಹೊರಜಿಲ್ಲೆಯ ತಲಾ ಓರ್ವರು ಇದ್ದಾರೆ. ಮೃತರೆಲ್ಲ ಕೊರೋನ ಸೋಂಕಿನ ಜೊತೆಗೆ ವಿವಿಧ ರೋಗಗಳಿಂದ ಬಳಲುತ್ತಿದ್ದರು. ಜಿಲ್ಲೆಯಲ್ಲಿ ಮೃತರ ಸಂಖ್ಯೆ 490ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಸೋಮವಾರ ಮತ್ತೆ 233 ಮಂದಿಯಲ್ಲಿ ಕೊರೋನ ಪಾಸಿಟಿವ್ ಕಂಡುಬಂದಿದೆ. ಕಳೆದ ಎರಡು ವಾರಗಳಿಂದ ಬರುತ್ತಿರುವ ಕೊರೋನ ವರದಿಗಳನ್ನು ಅವಲೋಕನ ಮಾಡಿದರೆ ಸೋಮವಾರದ ವರದಿಯಲ್ಲಿ ಕಡಿಮೆ ಪಾಸಿಟಿವ್ ಪ್ರಕರಣ ಕಂಡುಬಂದಿವೆ. ಸೋಂಕಿತರ ಪೈಕಿ 105 ಮಂದಿಗೆ ಸಾಮಾನ್ಯ ಶೀತ ಲಕ್ಷಣವಿದೆ. ಸೋಂಕಿತರ ಸಂಪರ್ಕದಲ್ಲಿದ್ದ 78 ಮಂದಿ, ತೀವ್ರ ಉಸಿರಾಟ ತೊಂದರೆ ಯಿಂದ ಬಳಲುತ್ತಿದ್ದ ಒಂಬತ್ತು ಮಂದಿಗೆ ಸೋಂಕು ಬಾಧಿಸಿದೆ. ಇನ್ನು 41 ಮಂದಿಗೆ ಯಾರಿಂದ ಸೋಂಕು ತಗುಲಿದೆ ಎನ್ನುವುದು ಆರೋಗ್ಯ ಇಲಾಖೆ ಸಿಬ್ಬಂದಿ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

ಎಂದಿನಂತೆಯೇ ಸೋಮವಾರ ಕೂಡ ಮಂಗಳೂರು ತಾಲೂಕಿನಲ್ಲೇ ಸೋಂಕಿತರ ಪ್ರಮಾಣ (122) ಅಧಿಕವಿದೆ. ಇನ್ನು, ಬಂಟ್ವಾಳ-53, ಪುತ್ತೂರು-6, ಸುಳ್ಯ-5, ಬೆಳ್ತಂಗಡಿ-10, ಹೊರಜಿಲ್ಲೆಯ 37 ಮಂದಿಗೆ ಪಾಸಿಟಿವ್ ಇರುವುದು ಪತ್ತೆಯಾಗಿದೆ. 76 ಪುರುಷರು ಹಾಗೂ 50 ಮಹಿಳೆಯರು ಸೇರಿದಂತೆ 126 ಮಂದಿಯಲ್ಲಿ ಕೊರೋನ ಸೋಂಕಿನ ಲಕ್ಷಣಗಳಿವೆ. ಆದರೆ, 60 ಪುರುಷರು, 47 ಮಹಿಳೆಯರು ಸಹಿತ 107 ಮಂದಿಯಲ್ಲಿ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 20,367ಕ್ಕೆ ಏರಿಕೆ ಕಂಡಿದೆ.

404 ಮಂದಿ ಗುಣಮುಖ: ಆರೋಗ್ಯಕರ ಬೆಳವಣಿಗೆಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿನ ಸೋಂಕಿತರು ಹೆಚ್ಚಿನ ಪ್ರಮಾಣದಲ್ಲಿ ಗುಣಮುಖರಾಗು ತ್ತಿರುವುದು ಸಕಾರಾತ್ಮಕ ಪರಿಣಾಮ ಬೀರುತ್ತಿದೆ. ಸೋಮವಾರ ಸೋಂಕಿತರ ಸಂಖ್ಯೆಯಲ್ಲಿ (233)ತೀರಾ ಇಳಿಕೆ ಕಂಡುಬಂದರೂ ಗುಣಮುಖ ರಾದವರ ಸಂಖ್ಯೆಯಲ್ಲಿ (404) ಭಾರೀ ಏರಿಕೆ ಕಂಡುಬಂದಿದೆ. ಅಲ್ಲದೆ, ಒಟ್ಟು ಸೋಂಕಿತರ ಪೈಕಿ ಶೇ.75ರಷ್ಟು ಮಂದಿ ಕೊರೋನದಿಂದ ಮುಕ್ತ ರಾಗಿರುವುದು ಗಮನಾರ್ಹ ಸಂಗತಿಯಾಗಿದೆ.

ಸೋಂಕಿತರ ಪೈಕಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಿಂದ 185 ಮಂದಿ, ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 219 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇಲ್ಲಿಯವರೆಗೆ 15,505 ಮಂದಿ ಗುಣರಾದಂತಾಗಿದೆ. ಜಿಲ್ಲೆಯಲ್ಲಿ 4,371 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News