ಗೂಢಚರ್ಯೆ ಪ್ರಕರಣ: ಪತ್ರಕರ್ತ ರಾಜೀವ್ ಶರ್ಮಾ ಕಸ್ಟಡಿ ಅವಧಿ ವಿಸ್ತರಣೆ

Update: 2020-09-21 15:17 GMT

ಹೊಸದಿಲ್ಲಿ,ಸೆ.21: ಇಲ್ಲಿಯ ಮುಖ್ಯ ಮಹಾನಗರ ನ್ಯಾಯಾಲಯವು ಅಧಿಕೃತ ರಹಸ್ಯಗಳ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತ ರಾಜೀವ ಶರ್ಮಾ ಅವರ ಕಸ್ಟಡಿ ಅವಧಿಯನ್ನು ಒಂದು ವಾರ ವಿಸ್ತರಿಸಿ ಸೋಮವಾರ ಆದೇಶಿಸಿದೆ. ಶರ್ಮಾ ಭಾರತಿಯ ಸೇನೆಯ ನಿಯೋಜನೆ ಮತ್ತು ದೇಶದ ಗಡಿ ಕಾರ್ಯತಂತ್ರದ ಬಗ್ಗೆ ಚೀನಿ ಗುಪ್ತಚರ ಸಂಸ್ಥೆಗಳಿಗೆ ಮಾಹಿತಿಗಳನ್ನು ತಲುಪಿಸುತ್ತಿದ್ದರು ಎಂದು ಆರೋಪಿಸಲಾಗಿದೆ.

ಸೆ.14ರಂದು ದಿಲ್ಲಿ ಪೊಲೀಸ್‌ನ ವಿಶೇಷ ಘಟಕದಿಂದ ಬಂಧಿಸಲ್ಪಟ್ಟಿದ್ದ ಶರ್ಮಾರನ್ನು ಮರುದಿನ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿದ್ದು,ಆರು ದಿನಗಳ ಪೊಲೀಸ್ ಕಸ್ಟಡಿಯನ್ನು ವಿಧಿಸಲಾಗಿತ್ತು. ಅವರ ಬಳಿ ರಕ್ಷಣಾ ಇಲಾಖೆಯ ವರ್ಗೀಕೃತ ದಾಖಲೆಗಳು ಪತ್ತೆಯಾಗಿವೆ ಎಂದು ಪೊಲೀಸರು ಆರೋಪಿಸಿದ್ದರು.

ನ್ಯಾ.ಪವನಸಿಂಗ್ ರಾಜಾವತ್ ಅವರು ಶರ್ಮಾರ ಸಹವರ್ತಿಗಳಾದ ಚೀನಿ ಮಹಿಳೆ ಮತ್ತು ನೇಪಾಳಿ ವ್ಯಕ್ತಿಯ ಕಸ್ಟಡಿ ಅವಧಿಯನ್ನೂ ಒಂದು ವಾರ ವಿಸ್ತರಿಸಿದರು. ವರ್ಗೀಕೃತ ಮಾಹಿತಿಗಳಿಗಾಗಿ ಈ ಇಬ್ಬರು ಆರೋಪಿಗಳು ಶರ್ಮಾಗೆ ಭಾರೀ ಮೊತ್ತದ ಹಣವನ್ನು ಪಾವತಿಸಿದ್ದರು ಎಂದೂ ಪೊಲೀಸರು ಆಪಾದಿಸಿದ್ದಾರೆ.

 ಶರ್ಮಾ ‘ರಾಜೀವ್ ಕಿಷ್ಕಿಂಧಾ’ ಹೆಸರಿನ ಯು ಟ್ಯೂಬ್ ಚಾನೆಲ್ ಹೊಂದಿದ್ದು,ಅದಕ್ಕೆ ಸಾವಿರಾರು ಫಾಲೋವರ್‌ಗಳಿದ್ದಾರೆ. ತನ್ನ ಬಂಧನದ ದಿನದಂದು ಶರ್ಮಾ ಎರಡು ವೀಡಿಯೊಗಳನ್ನು ಅಪ್‌ಲೋಡ್ ಮಾಡಿದ್ದರು. ಗಡಿ ಉದ್ವಿಗ್ನತೆಯ ನಡುವೆ ಭಾರತದೊಂದಿಗೆ ಮಾತುಕತೆ ನಡೆಸುತ್ತಿದ್ದರೂ ಚೀನಾ ಈಗಲೂ ಕಿಡಿಗೇಡಿತನವನ್ನು ಮಾಡುತ್ತಿದೆ ಎಂದು ಒಂದು ವೀಡಿಯೊದಲ್ಲಿ ಹೇಳಲಾಗಿದ್ದರೆ,ಇನ್ನೊಂದು ವೀಡಿಯೊ ದೇಶದಲ್ಲಿ ಪತ್ರಿಕೋದ್ಯಮದ ಸ್ಥಿತಿಯ ಕುರಿತು ಬೇಸರವನ್ನು ತೋಡಿಕೊಂಡಿತ್ತು.

ಶರ್ಮಾ ಅವರ ಬಂಧನವನ್ನು ಶನಿವಾರ ಖಂಡಿಸಿದ್ದ ಪ್ರೆಸ್ ಕ್ಲಬ್ ಆಫ್ ಇಂಡಿಯಾ,ಶರ್ಮಾ ವ್ಯೂಹಾತ್ಮಕ ವಿದ್ಯಮಾನಗಳ ಬಗ್ಗೆ ಬರೆಯುತ್ತಿರುತ್ತಾರೆ ಮತ್ತು ಸಾರ್ವಜನಿಕವಾಗಿ ಲಭ್ಯ ಅಂತರ್ಜಾಲದಿಂದ ವರ್ಗೀಕೃತ ಮಾಹಿತಿಗಳನ್ನು ಪಡೆದುಕೊಂಡಿದ್ದಿರಬಹುದು ಎಂದು ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News