ಕಟಪಾಡಿ: ನೇಕಾರರ ಮನೆಗೆ ನುಗ್ಗಿದ ನೆರೆ ನೀರು: ಕೈಮಗ್ಗಕ್ಕೆ ಹಾನಿ

Update: 2020-09-21 16:14 GMT

ಉಡುಪಿ, ಸೆ.21: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಸೃಷ್ಠಿಯಾಗಿರುವ ಪ್ರವಾಹದ ಪರಿಣಾಮ ಕಳೆದ 55 ವರ್ಷಗಳಿಂದ ಕೈಮಗ್ಗವನ್ನೆ ಬದುಕಿಗೆ ಅವಲಂಬಿಸಿಕೊಂಡಿದ್ದ ಕಟಪಾಡಿ ಮಟ್ಟುವಿನ ಲಕ್ಷ್ಮಣ್ ಶೆಟ್ಟಿಗಾ್ ಕುಟುಂಬ ಸಂಕಷ್ಟಕ್ಕೆ ಒಳಗಾಗಿದೆ.

ಕೈಮಗ್ಗದಿಂದ ಯಕ್ಷಗಾನದ ಸೀರೆಗಳನ್ನು ನೇಯ್ಗೆ ಮಾಡುವ ಕಾಯಕದಲ್ಲಿ ತೊಡಗಿಸಿಕೊಂಡಿರುವ ಜಿಲ್ಲೆಯ ಬೆರಳಣಿಕೆ ಮಂದಿಯಲ್ಲಿ ಲಕ್ಷ್ಮಣ್ ಶೆಟ್ಟಿಗಾರ್ ಕೂಡ ಒಬ್ಬರು. ಇವರು ತನ್ನ ಪತ್ನಿ ಸಾವಿತ್ರಿ ಹಾಗೂ ಕುಟುಂಬದವರೊಂದಿಗೆ ಕೈಮಗ್ಗದ ಮೂಲಕ ಯಕ್ಷಗಾನ ಸೀರೆ ನೆಯ್ಯುವ ಕೆಲಸ ಮಾಡಿಕೊಂಡಿದ್ದಾರೆ. ಅವರ ಜೀವನಾಧಾರ ಕೂಡ ಆಗಿದೆ.

ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಉಂಟಾಗಿರುವ ನೆರೆಯಿಂದ ಇವರ ಮನೆ ಸೇರಿದಂತೆ ಸುತ್ತಮುತ್ತಲಿನ ನೂರಾರು ಮನೆಗಳು ಜಲಾವೃತ ಗೊಂಡಿತ್ತು. ಇದ ರಿಂದ ನೀರು ಮನೆಯೊಳಗೆ ನುಗ್ಗಿದ ಪರಿಣಾಮ ಮನೆ ಗೋಡೆಗೆ ಹಾನಿ ಯಾಗಿದೆ. ಅದೇ ರೀತಿ ಮಳೆ ನೀರಿನಿಂದ ಕೈಮಗ್ಗ ಹಾಳಾಗಿದ್ದು, ಮಗ್ಗದಲ್ಲಿದ್ದ ಹೊಸ ಹಾಸಿನ ನೂಲು ಸಹ ಹಾನಿಹಗೊಳಗಾಗಿದೆ.

ಸಚಿವೆ ಸ್ಮಿತಿ ಇರಾನಿ ಸ್ಪಂದನೆ: ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೇಂದ್ರ ಸಚಿವ ಸ್ಮಿತಿ ಇರಾನಿಯ ಗಮನಕ್ಕೂ ಬಂತ್ತೆನ್ನಲಾಗಿದೆ. ಕೂಡಲೇ ಸ್ಪಂದಿಸಿದ ಸಚಿವೆ, ಲಕ್ಷ್ಮಣ್ ಶೆಟ್ಟಿಗಾರ್ ಕುಟುಂಬಕ್ಕೆ ನೆರವು ನೀಡು ವಂತೆ ಕೇಂದ್ರ ಸರಕಾರದ ಟೆಕ್ಸ್‌ಟೈಲ್ ಇಲಾಖೆಯ ಅಧೀನದಲ್ಲಿರುವ ಬೆಂಗಳೂರು ನೇಕಾರರ ಸೇವಾ ಕೇಂದ್ರಕ್ಕೆ ನಿರ್ದೇಶನ ನೀಡಿದರು.

ಅದರಂತೆ ಇಂದು ಬೆಳಗ್ಗೆ ಬೆಂಗಳೂರಿನಿಂದ ಶೆಟ್ಟಿಗಾರ್ ಮನೆಗೆ ಆಗಮಿಸಿದ ಸೇವಾ ಕೇಂದ್ರದ ಅಧಿಕಾರಿಗಳು, ಹಾನಿಯ ಬಗ್ಗೆ ಪರಿಶೀಲನೆ ನಡೆಸಿದರು. ಕೈಮಗ್ಗಕ್ಕೆ ಅನುಕೂಲವಾಗುವಂತೆ ಮನೆ ಸಮೀಪ ಶೆಡ್ ನಿರ್ಮಿಸಲು 1.20ಲಕ್ಷ ರೂ. ಅನುದಾನವನ್ನು ಅಧಿಕಾರಿಗಳು ಇದೇ ಸಂದರ್ಭದಲ್ಲಿ ಮಂಜೂರು ಮಾಡಿದರು ಎಂದು ಶಿವಳ್ಳಿ ಪ್ರಾಥಮಿಕ ನೇಕಾರರ ಸೇವಾ ಸಹಕಾರ ಸಂಘ ಆದಿ ಉಡುಪಿ ಇದರ ಕಾರ್ಯದರ್ಶಿ ಶಶಿಕಾಂತ್ ಕೋಟ್ಯಾನ್ ತಿಳಿಸಿದ್ದಾರೆ.

ಅದೇ ರೀತಿ ಸಹಕಾರಿ ಸಂಘದ ವತಿಯಿಂದಲೂ ಶೆಟ್ಟಿಗಾರ್ ಕುಟುಂಬಕ್ಕೆ ತುರ್ತು ಪರಿಹಾರವನ್ನು ನೀಡಲಾಗಿದೆ. ಮುಂದೆ ಹಾನಿ ಪರಿಶೀಲನೆ ನಡೆಸಿ ಹೆಚ್ಚಿನ ಪರಿಹಾರ ಒದಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಅದೇ ರೀತಿ ಶೆಟ್ಟಿಗಾರ್ ಕುಟುಂಬಕ್ಕೆ ಹಲವು ಮಂದಿ ದಾನಿಗಳು ನೆರವು ಒದಗಿಸಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News