ದ.ಕ.ಜಿಲ್ಲೆಯಲ್ಲಿ ಮುಂದುವರಿದ ಮಳೆ-ಹಾನಿ

Update: 2020-09-21 15:34 GMT

ಮಂಗಳೂರು, ಸೆ.21: ದ.ಕ.ಜಿಲ್ಲೆಯಲ್ಲಿ ಸೋಮವಾರವೂ ಮಳೆ ಮುಂದುವರಿದಿದೆ. ಈ ಮಧ್ಯೆ ಕಳೆದೊಂದು ವಾರದಿಂದ ಸುರಿಯುತ್ತಿದ್ದ ಮಳೆಯಿಂದ ಜರ್ಜರಿತಗೊಂಡಿದ್ದ ಜಿಲ್ಲೆಯ ಹಲವು ಮನೆಗಳ ಪೈಕಿ ರವಿವಾರ ರಾತ್ರಿಯಿಂದ ಸೋಮವಾರ ಸಂಜೆಯವರೆಗೆ 11 ಮನೆಗಳು ಪೂರ್ಣ ಹಾನಿಗೀಡಾಗಿವೆ. 21 ಮನೆಗಳಿಗೆ ಭಾಗಶಃ ಹಾನಿಯಾಗಿವೆ.

ಸೋಮವಾರ ಬೆಳಗ್ಗಿನ ವೇಳೆ ಕೆಲಕಾಲ ಬಿಸಿಲು ಕಾಣಿಸಿಕೊಂಡಿತ್ತು. ಉಳಿದಂತೆ ಮೋಡ ಕವಿದ ವಾತಾವರಣದ ಮಧ್ಯೆ ಬಿರುಸಿನ ಮಳೆಯಾ ಗಿದೆ. ಆದರೆ ಮಳೆಯಿಂದ ನಗರದ ಯಾವುದೇ ಕಡೆ ನೀರು ನಿಂತ ಅಥವಾ ಅಂಗಡಿ ಮುಂಗಟ್ಟಿನೊಳಗೆ ಮಳೆ ನೀರು ನುಗ್ಗಿದ ಬಗ್ಗೆ ಮಾಹಿತಿ ಇಲ್ಲ.

ನೆರೆ ಹಾವಳಿಯ ಹಿನ್ನಲೆಯಲ್ಲಿ ತೆರೆಯಲಾದ ಕಾಳಜಿ ಕೇಂದ್ರಗಳ ಪೈಕಿ ಇದೀಗ ಮೂಲ್ಕಿಯ ಕಾಳಜಿ ಕೇಂದ್ರ ಮಾತ್ರ ತೆರೆಯಲ್ಪಟ್ಟಿದ್ದು, ಅಲ್ಲಿ 7 ಮಂದಿಗೆ ಆಶ್ರಯ ನೀಡಲಾಗಿದೆ. ದ.ಕ.ಜಿಲ್ಲೆಯಲ್ಲಿ 199.2 ಹೆಕ್ಟೇರ್ ಕೃಷಿ ಭೂಮಿಗೆ ಹಾನಿಯಾಗಿದ್ದು, ತೋಟಗಾರಿಕಾ ಬೆಳೆ ಹಾನಿಯ ಬಗ್ಗೆ ಸಮೀಕ್ಷೆ ಮಾಡಲಾಗುತ್ತಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ಚಾರ್ಮಾಡಿ ಘಾಟ್‌ನಲ್ಲಿ ಲಘು ವಾಹನಗಳ ಓಡಾಟಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ರವಿವಾರ ಕುಸಿತ ಕಂಡ ನೀರುಮಾರ್ಗದ ಕೆಲರಾಯ್ ರಸ್ತೆಯ ಪುನನಿರ್ಮಾಣ ಕಾಮಗಾರಿ ಆರಂಭಗೊಂಡಿಲ್ಲ. ಹಾಗಾಗಿ ಅಲ್ಲಿನ ಜನರು ಪರ್ಯಾಯ ರಸ್ತೆ ಬಳಸಿಕೊಳ್ಳುತ್ತಿದ್ದಾರೆ.

ನೀರಿನ ಮಟ್ಟ: ದ.ಕ.ಜಿಲ್ಲೆಯ ಜೀವನದಿಯಾದ ಬಂಟ್ವಾಳದಲ್ಲಿ ನೇತ್ರಾವತಿ ನದಿಯ ನೀರಿನ ಮಟ್ಟವು 7.1 ಮೀ., ಉಪ್ಪಿನಂಗಡಿಯಲ್ಲಿ ನೇತ್ರಾ ವತಿ ನದಿಯ ನೀರಿನ ಮಟ್ಟವು 27.8 ಮೀ., ಹಾಗೂ ಕುಮಾರಧಾರ ನದಿಯ ನೀರಿನ ಮಟ್ಟವು 23.0 ಮೀ. ಇದೆ. ಗುಂಡ್ಯದ ನದಿ ನೀರಿನ ಮಟ್ಟವು 4.6 ಮೀ.ನಷ್ಟಿದೆ.

ಮಳೆ ಪ್ರಮಾಣ: ಕಳೆದ ವರ್ಷದ ಸೆ.21ಕ್ಕೆ ಹೋಲಿಸಿದರೆ ಈ ದಿನ ಅತ್ಯಧಿಕ ಮಳೆಯಾಗಿದೆ. ಕಳೆದ ವರ್ಷದ ಸೆ.21ರಂದು ಕೇವಲ 5.5 ಮೀ. ಮಳೆಯಾಗಿದ್ದರೆ ಈ ದಿನ 51.3 ಮಿ.ಮೀ. ಮಳೆಯಾಗಿದೆ. ಮಂಗಳೂರಿನಲ್ಲಿ 71 ಮಿ.ಮೀ., ಬೆಳ್ತಂಗಡಿಯಲ್ಲಿ 50 ಮಿ.ಮೀ., ಬಂಟ್ವಾಳದಲ್ಲಿ 47 ಮಿ.ಮೀ., ಪುತ್ತೂರಿನಲ್ಲಿ 39 ಮಿ.ಮೀ., ಸುಳ್ಯದಲ್ಲಿ 34 ಮಿ.ಮೀ., ಮೂಡುಬಿದಿರೆಯಲ್ಲಿ 61 ಮಿ.ಮೀ. ಮಳೆಯಾಗಿದೆ.

ಆರೇಂಜ್ ಆಲರ್ಟ್

ಕರಾವಳಿಯಲ್ಲಿ ಮಂಗಳವಾರ ‘ಆರೆಂಜ್ ಅಲರ್ಟ್’ ಘೋಷಣೆ ಮಾಡಲಾಗಿದೆ. ಹಾಗಾಗಿ ಮಳೆಯ ತೀವ್ರತೆ ಕಡಿಮೆಯಾಗುವ ಸಾಧ್ಯತೆಯಿದೆ. ಸಮುದ್ರದಲ್ಲಿ ಗಂಟೆಗೆ 45-55 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿವೆ.

ಒಟ್ಟು 32 ಮನೆಗಳಿಗೆ ಹಾನಿ

ದ.ಕ ಜಿಲ್ಲೆಯಲ್ಲಿ ರವಿವಾರ ಸಂಜೆಯಿಂದ ಸೋಮವಾರ ಸಂಜೆಯವರೆಗೆ ಮಳೆಯಿಂದ ಉಂಟಾದ ಪ್ರಾಕೃತಿಕ ವಿಕೋಪದಲ್ಲಿ ಪೂರ್ಣ 11 ಮತ್ತು ಭಾಗಶಃ 21 ಸಹಿತ ಒಟ್ಟು 32 ಮನೆಗಳಿಗೆ ಹಾನಿಗೀಡಾಗಿವೆ. ಮಂಗಳೂರು ತಾಲೂಕಿನಲ್ಲಿ 5 ಮನೆಗಳು ಪೂರ್ಣ, 6 ಮನೆಗಳು ಭಾಗಶಃ, ಬಂಟ್ವಾಳದಲ್ಲಿ 5 ಪೂರ್ಣ, 8 ಭಾಗಶಃ ಹಾನಿಗೀಡಾಗಿವೆ. ಪುತ್ತೂರಿನಲ್ಲಿ 2 ಭಾಗಶಃ, ಸುಳ್ಯದಲ್ಲಿ 1 ಪೂರ್ಣ, ಮೂಡುಬಿದಿರೆಯಲ್ಲಿ 4 ಭಾಗಶಃ ಮತ್ತು ಕಡಬಲ್ಲಿ 1 ಮನೆ ಭಾಗಶಃ ಹಾನಿಗೀಡಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News