10 ಬಾರಿ ಮೌಂಟ್ ಎವರೆಸ್ಟ್ ಏರಿದ್ದ ಆಂಗ್ ರಿಟಾ ಶೆರ್ಪಾ ಇನ್ನಿಲ್ಲ

Update: 2020-09-21 16:50 GMT
ಫೋಟೊ ಕೃಪೆ: Twitter (@Dahal_Shankar

ಹೊಸದಿಲ್ಲಿ,ಸೆ.21: ಜಗತ್ತಿನ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟನ್ನು 10 ಸಲ ಆರೋಹಣ ಮಾಡಿರುವವರಲ್ಲಿ ಮೊದಲಿಗರಾಗಿದ್ದ ಆಂಗ್ ರಿಟಾ ಶೆರ್ಪಾ ಅವರು ಸೋಮವಾರ ನಿಧನರಾಗಿದ್ದಾರೆ. ದೀರ್ಘಕಾಲದ ಅಸ್ವಸ್ಥತೆಯಿಂದ ಬಳಲುತ್ತಿದ್ದ ಅವರು ಸೋಮವಾರ ಬೆಳಗ್ಗೆ ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿರುವ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆಂದು ಅವರ ಪುತ್ರ ಫುರ್ಬಾ ಶೆರಿಂಗ್ ತಿಳಿಸಿದ್ದಾರೆ.

ಪರ್ವತಾರೋಹಣದಲ್ಲಿ ಅಪಾರ ಚಾಕಚಕ್ಯತೆಯನ್ನು ಹೊಂದಿದ್ದ ಆಂಗ್ ರಿಟಾ ‘ಹಿಮದ ಚಿರತೆ’ ಎಂದೇ ಜನಪ್ರಿಯರಾಗಿದ್ದಾರೆ. 1983ರಿಂದ 1996ರ ನಡುವೆ ಆಂಗ್ ರಿಟಾ ಅವರು 8,850 ಮೀಟರ್ ಎತ್ತರದ ಮೌಂಟ್ ಎವರೆಸ್ಟ್ ಶಿಖರವನ್ನು 10 ಸಲ ಆರೋಹಣ ಮಾಡಿದ್ದಾರೆ. ಯಾವುದೇ ಆಕ್ಸಿಜನ್ ಸಿಲಿಂಡರ್‌ಗಳ ನೆರವಿಲ್ಲದೆ ಪರ್ವತವನ್ನೇರಿರುವುದು ಅವರ ಮೇರು ಸಾಧನೆಯಾಗಿದೆ.

 72 ವರ್ಷದ ಆಂಗ್ ರಿಟಾ ಅವರು ದೀರ್ಘಕಾಲದಿಂದ ಮೆದುಳು ಹಾಗೂ ಪಿತ್ತಜನಕಾಂಗದ ತೊಂದರೆಯಿಂದ ಬಳಲುತ್ತಿದ್ದರು. ಆಂಗ್ ರಿಟಾ ನಿಧನಕ್ಕೆ ನೇಪಾಳದ ಪರ್ವತಾರೋಹಣ ಸಂಸ್ಥೆಯ ಮಾಜಿ ಅಧ್ಯಕ್ಷ ಆಂಗ್ ಶೆರಿಂಗ್ ಶೆರ್ಪಾ ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ಆಂಗ್ ರಿಟಾ ಅವರು ಪರ್ವತಾರೋಹಣದ ತಾರೆಯಾಗಿದ್ದರು. ಅವರ ನಿಧನವು ದೇಶಕ್ಕೆ ಹಾಗೂ ಪರ್ವತಾರೋಹಣ ಸಮುದಾಯಕ್ಕಾಗಿರುವ ಬಹುದೊಡ್ಡ ನಷ್ಟ’’ ಎಂಬುದಾಗಿ ಅವರು ಕಂಬನಿ ಮಿಡಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News