ಜನವಿರೋಧಿ ಕಾನೂನುಗಳನ್ನು ಹಿಂಪಡೆಯಿರಿ: ಪಾಪ್ಯುಲರ್ ಫ್ರಂಟ್ ಆಗ್ರಹ

Update: 2020-09-21 16:30 GMT

ಮಂಗಳೂರು : ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರಗಳು ಯಾವುದೇ ಚರ್ಚೆ ನಡೆಸದೆ, ಏಕಪಕ್ಷೀಯವಾಗಿ  ಜಾರಿಗೊಳಿಸುತ್ತಿರುವ ಕಾನೂನುಗಳು ಜನರಿಗೆ ಮಾರಕವಾಗಿ ಪರಿಣಮಿಸುತ್ತಿದ್ದು, ಸರಕಾರವು ಇಂತಹ ಜನವಿರೋಧಿ ಕಾನೂನುಗಳನ್ನು ಕೂಡಲೇ ಹಿಂಪಡೆಯ ಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ಆಗ್ರಹಿಸಿದ್ದಾರೆ.

ಸರಕಾರವು ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರೈತರ ಜಮೀನನ್ನು ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸುವ ಹುನ್ನಾರದಲ್ಲಿದೆ. ಭೂ ಒಡೆತನ, ಎಪಿಎಂಸಿ, ವಿದ್ಯುತ್ ಖಾಸಗೀಕರಣ ಮುಂತಾದ ಕಾಯ್ದೆಗಳ ತಿದ್ದುಪಡಿಗೆ ಸುಗ್ರೀವಾಜ್ಞೆ ತರಲಾಗಿದೆ. ಸರಕಾರದ ಈ ಸರ್ವಾಧಿ ಕಾರಿ ನಡೆಯು ದೇಶದ ರೈತರು, ಕಾರ್ಮಿಕರು ಮತ್ತು ಬಡ ವರ್ಗವನ್ನು ಭಾರೀ ಸಂಕಷ್ಟಕ್ಕೆ ಗುರಿಪಡಿಸಲಿದೆ. ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ಕೃಷಿ ಮಸೂದೆಗಳು ಈ ದೇಶದ ಜೀವಾಳವಾಗಿರುವ ರೈತರ ಬೆನ್ನೆಲುಬನ್ನು ಮುರಿದುಹಾಕಲಿದೆ ಮತ್ತು ಅವರನ್ನು ನವ ಜಮೀನ್ದಾರಿ ಪದ್ಧತಿಯ ಗುಲಾಮರನ್ನಾಗಿಸಲಿದೆ. ಅದೇ ರೀತಿ ಎಪಿಎಂಸಿ ಕಾನೂನು ಮಧ್ಯಮ ಮತ್ತು ಸಣ್ಣ ವ್ಯಾಪಾರಿಗಳನ್ನು ಪತನದಂಚಿಗೆ ತಳ್ಳಲಾಗಿದೆ ಎಂದು ಹೇಳಿದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳು ತರುತ್ತಿರುವ ಕರಾಳ ಕಾನೂನುಗಳ ಕುರಿತು ರಾಜ್ಯದ ಜನತೆ ಜಾಗೃತರಾಗಬೇಕು. ಇಂತಹ ಜನವಿರೋಧಿ ಕ್ರಮಗಳ ವಿರುದ್ಧ ಪರಿಣಾಮಕಾರಿ ಜನಾಂದೋಲನವೊಂದು ಮೂಡಿಬರಬೇಕಾಗಿದೆ. ರಾಜ್ಯದಲ್ಲಿ ಇದೀಗ ರೈತಪರ ಸಂಘಟನೆಗಳು ಮತ್ತು ವಿವಿಧ ಜನಪರ ಸಂಘಟನೆಗಳು ಹಮ್ಮಿಕೊಂಡಿರುವ ಜನಾಂದೋನನಕ್ಕೆ ಪಾಪ್ಯುಲರ್ ಫ್ರಂಟ್ ಸಂಪೂರ್ಣ ಬೆಂಬಲ ಘೋಷಿಸುತ್ತದೆ. ಅದೇ ರೀತಿ ರಾಜ್ಯದ ಜನತೆ ಈ ಹೋರಾಟದೊಂದಿಗೆ ಕೈಜೋಡಿಸಬೇಕೆಂದು ಯಾಸಿರ್ ಹಸನ್ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News