ಸೆ.24 ರಂದು ಆರೋಗ್ಯ ಸಿಬ್ಬಂದಿಗಳಿಂದ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ

Update: 2020-09-21 16:51 GMT

ಮಡಿಕೇರಿ ಸೆ.21 : ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಬೇಡಿಕೆ ಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘ ಸೆ.24 ರಂದು ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಸಂಘದ ಅಧ್ಯಕ್ಷ ಎಂ.ಮಹದೇವಪ್ಪ, ಆರೋಗ್ಯ ಇಲಾಖೆಯ ಗುತ್ತಿಗೆ ಮತ್ತು ಹೊರ ಗುತ್ತಿಗೆ ನೌಕರರು ಅದ ವೈದ್ಯಕೀಯ, ಅರೆವೈದ್ಯಕೀಯ ಮತ್ತು ಕಚೇರಿ ಸಿಬ್ಬಂದಿಗಳ ಹಲವಾರು ವರ್ಷಗಳ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ವಹಿಸದೇ ಇರುವುದು ಖಂಡನೀಯ ಎಂದರು.

ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ ಸೆ.24 ರಂದು ಆರೋಗ್ಯ ಇಲಾಖೆಯ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿರುವುದಾಗಿ ಹೇಳಿದರು. ರಾಜ್ಯ ಸರ್ಕಾರದ ಆರೋಗ್ಯ ಕ್ಷೇತ್ರದ ಬಜೆಟ್ ಶೇಕಡಾವಾರು ಹೆಚ್ಚಿಸಬೇಕು ಮತ್ತು ಈ ಕ್ಷೇತ್ರಕ್ಕೆ ಪ್ರಾಮುಖ್ಯತೆ ನೀಡಿ, ಅದಕ್ಕೆ ಅಗತ್ಯವಿರುವ ಆರ್ಥಿಕ ನೆರವನ್ನು ಕೇಂದ್ರ ಸರ್ಕಾರ ನೀಡಬೇಕು, ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಕ್ಷೇಮಾಭಿವೃದ್ಧಿಗೆ ಆದ್ಯತೆ ನೀಡಲು ಕ್ರಮ ವಹಿಸಬೇಕು, ನೌಕರರಿಗೆ ಸೇವಾ ಭದ್ರತೆಯನ್ನು ನೀಡಿ, ಖಾಯಂಗೊಳಿಸಬೇಕು. ಎಲ್ಲಾ ಹುದ್ದೆಗಳನ್ನು (ಎನ್.ಎಚ್.ಎಮ್ ಕಾರ್ಯಕ್ರಮದ ಹುದ್ದೆಗಳನ್ನು ಒಳಗೊಂಡಂತೆ) ಖಾಯಂ ಹುದ್ದೆಗಳಾಗಿ ಸೃಷ್ಟಿಸಬೇಕು, ಎಲ್ಲಾ ಹುದ್ದೆಗಳಿಗೆ ವೇತನ ಭತ್ಯೆಗಳು ಮತ್ತು ವೇತನ ಶ್ರೇಣಿಯನ್ನು ನೀಡಿ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಹರಿಯಾಣ ಮಾದರಿಯಲ್ಲಿ  ರಚಿಸಬೇಕು, ವೈದ್ಯಕೀಯ ಶಿಕ್ಷಣ ಇಲಾಖೆ ಜಾರಿ ಮಾಡಿರುವ ಏಕರೂಪ ವೇತನದ ಮಾದರಿಯನ್ನು ಎಲ್ಲಾ ನೌಕರರಿಗೆ ಜಾರಿ ಮಾಡಲು ಕ್ರಮ ಕೈಗೊಳ್ಳಬೇಕು, ಎಲ್ಲಾ ನೌಕರರಿಗೆ ಗುತ್ತಿಗೆದಾರರು ಅಥವಾ ಮಧ್ಯವರ್ತಿಗಳಿಲ್ಲದೆ ನೇರವಾಗಿ ಇಲಾಖೆಯಿಂದ ವೇತನ ಪಾವತಿ ಮಾಡಬೇಕು, ಒಳ ಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವವರಿಗೆ ಸಿಗುವ ಸೌಲಭ್ಯಗಳು ಹೊರಗುತ್ತಿಗೆ ನೌಕರರಿಗೆ ಸಹ ನೀಡಬೇಕು, ಎನ್‍ಹೆಚ್‍ಎಂ ಅಡಿಯಲ್ಲಿ ಕೆಲಸ ಮಾಡುವ ನೌಕರರಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ಬೋನಸ್ ಹೆಚ್ಚಳವನ್ನು ಕಾರ್ಯಗತಗೊಳಿ, ಆರೋಗ್ಯ ಯೋಜನೆಯನ್ನು ಗುತ್ತಿಗೆ ಹಾಗೂ ಗೊರಗುತ್ತಿಗೆ ನೌಕರರಿಗೆ ವಿಸ್ತರಿಸಬೇಕು, ಸಂಘದ ಅಧಿಕೃತ ಮುಷ್ಕರದ ದಿನಗಳಲ್ಲಿ ಕಡಿತವಾದ ವೇತನವನ್ನು ಪಾವತಿಸಲು ಕ್ರಮಕೈಗೊಳ್ಳಬೇಕು, ನೌಕರರ ಕಲ್ಯಾಣ ನಿಧಿ/ ಕಲ್ಯಾಣ ಮಂಡಳಿ ಸ್ಥಾಪಿಸಲು ಕ್ರಮ ವಹಿಸಬೇಕು, ಸರ್ಕಾರಿ ನೇಮಕಾತಿಗಳಲ್ಲಿ ವಯಸ್ಸಿನ ಮಿತಿಯನ್ನು ವಿಸ್ತರಿಸಬೇಕು, ಸೇವಾ ಅನುಭವಕ್ಕೆ ತಕ್ಕಂತೆ ಸೇವಾಂಕ ನೀಡಬೇಕು, ಪರಸ್ಪರ ವರ್ಗಾವಣೆ ಹಾಗೂ ಖಾಲಿ ಇರುವ ಜಾಗದಲ್ಲಿ ಸಾಮಾನ್ಯ ವರ್ಗಾವಣೆಗೆ ಅವಕಾಶ ನೀಡಬೇಕು, ಖಾಯಂ ನೇಮಕಾತಿಯಾದ ಕಾರಣ ನೌಕರರನ್ನು ಕೆಲಸದಿಂದ ತೆಗೆಯಬಾರದು ಮತ್ತು ಅನಗತ್ಯವಾಗಿ ಸ್ಥಳ ಬದಲಾವಣೆ ಮಾಡಬೇಕು, ಸಾವು ಅಥವಾ ಅಂಗವೈಪಲ್ಯ ಸಂದರ್ಭದಲ್ಲಿ ಸತಿ ಸಮಾನವಾದ ಪರಿಹಾರ ನೀಡುವುದು, ಸಣ್ಣ ಪುಟ್ಟ ನೆಪವೊಡ್ಡಿ ನೌಕರರನ್ನು ಕೆಲದಿಂದ ತೆಗೆಯುವ ಪದ್ಧತಿ ಕೈಬಿಡಬೇಕು, ಸಾರ್ವಜನಿಕರಿಗೆ ಅಗತ್ಯವಾದ ಇಲಾಖೆಯ ಗುತ್ತಿಗೆ ಹಾಗೂ ಹೊರ ನೌಕರರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸುವುದಾಗಿ ತಿಳಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ರಘು, ಖಜಾಂಚಿ ದಿವಾಕರ್ ಮತ್ತಿತರರು ಮನವಿ ಪತ್ರ ನೀಡುವ ಸಂದರ್ಭ ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News