ಇಮ್ರಾನ್ ಖಾನ್ ವಿರುದ್ಧ ಪಾಕ್ ಪ್ರತಿಪಕ್ಷಗಳ ಮೈತ್ರಿಕೂಟ

Update: 2020-09-21 17:20 GMT

ಇಸ್ಲಾಮಾಬಾದ್,ಸೆ.21: ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಆ ದೇಶದ ಪ್ರತಿಪಕ್ಷಗಳು ಮೈತ್ರಿಕೂಟ ರಚಿಸಿದ್ದು, ಸರಕಾರದ ರಾಜೀನಾಮೆಗೆ ಆಗ್ರಹಿಸಿ ದೇಶಾದ್ಯಂತ ಪ್ರತಿಭಟನಾ ಚಳವಳಿಯನ್ನು ಆರಂಭಿಸುವುದಾಗಿ ರವಿವಾರ ಘೋಷಿಸಿವೆ.

  ಪಾಕಿಸ್ತಾನ ಪೀಪಲ್ಸ್ ಪಾರ್ಟಿ ನೇತೃತ್ವದಲ್ಲಿ ರವಿವಾರ ನಡೆದ ಪ್ರತಿಪಕ್ಷಗಳ ಸಮಾವೇಶದಲ್ಲಿ ಈ ಬಗ್ಗೆ 26 ಅಂಶಗಳ ಜಂಟಿ ನಿರ್ಣಯವನ್ನು ಅಂಗೀಕರಿಸಲಾಯಿತು. ನವಾಝ್ ಶರೀಫ್ ನೇತೃತ್ವದ ಪಾಕಿಸ್ತಾನ ಮುಸ್ಲಿಂ ಲೀಗ್ (ಪಿಎಂಎಲ್-ಎನ್), ಜಮೀಯತ್ ಉಲೇಮಾ ಎ ಇಸ್ಲಾಂ ಫಝಲ್ (ಜೆಯುಐ-ಎಫ್) ಮತ್ತಿತರ ಪ್ರತಿಪಕ್ಷಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದವು.

  ಬಹುಪಕ್ಷ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಜೆಯುಐ (ಎಫ್ )ಪಕ್ಷದ ವರಿಷ್ಠ ವೌಲಾನಾ ಫಝಲುರ್ರಹ್ಮಾನ್ ಅವರು ಸಮಾವೇಶದಲ್ಲಿ ಅಂಗೀಕರಿಸಲಾದ ನಿರ್ಣಯವನ್ನು ಓದಿ ಹೇಳಿದರು. ಅಕ್ಟೋಬರ್‌ನಿಂದ ಪ್ರಧಾನಿ ಇಮ್ರಾನ್ ನೇತೃತ್ವದ ತೆಹ್ರೀಕೆ ಇನ್ಸಾಫ್ ಸರಕಾರದ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳನ್ನು ಆಯೋಜಿಸಲಾಗುವುದೆಂದು ತಿಳಿಸಿದರು.

   ಕಳೆದ ಚುನಾವಣೆಯಲ್ಲಿ ಹಾಲಿ ಆಡಳಿತಗಾರರನ್ನು ಅಧಿಕಾರಕ್ಕೇರಿಸಲು ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸಿದ ಸಂಸ್ಥೆ ಇಮ್ರಾನ್ ಖಾನ್ ಸರಕಾರಕ್ಕೆ ನಕಲಿ ಸ್ಥಿರತೆಯನ್ನು ನೀಡಿದೆ ಎಂದು ನಿರ್ಣಯದಲ್ಲಿ ಪಾಕ್ ಸೇನೆಯನ್ನು ಪರೋಕ್ಷವಾಗಿ ಉಲ್ಲೇಖಿಸಲಾಗಿದೆ.

ದೇಶದ ಆಂತರಿಕ ವ್ಯವಹಾರಗಳಲ್ಲಿ ಪಾಕ್ ಸೇನೆ ಮೂಗುತೂರಿಸುತ್ತಿರುವುದರ ಬಗ್ಗೆಯೂ ಸೇನೆಯ ಹೆಸರು ಹೇಳದೆ ಕಳವಳ ವ್ಯಕ್ತಪಡಿಸಿರುವ ನಿರ್ಣಯ ದೇಶದ ಸ್ಥಿರತೆಗೆ ಹಾಗೂ ಪ್ರಜಾತಾಂತ್ರಿಕ ಸಂಸ್ಥೆಗಳಿಗೆ ಅಪಾಯಕಾರಿಯಾಗಿದೆ ಎಂದು ನಿರ್ಣಯದಲ್ಲಿ ಪ್ರತಿಪಕ್ಷಗಳು ಕಳವಳ ವ್ಯಕ್ತಪಡಿಸಿವೆ.

ದೇಶದಲ್ಲಿ ಚುನಾವಣೆಗಳು ಪಾರದರ್ಶಕ ರೀತಿಯಲ್ಲಿ ನಡೆಯಬೇಕು ಹಾಗೂ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಗಳು ನಡೆಯಲು ಚುನಾವಣಾ ಸುಧಾರಣೆಗಳು ಜಾರಿಗೆ ತರುವಂತೆಯೂ ನಿರ್ಣಯ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News