ಎನ್ಎಂಪಿಟಿ: ಮೀನುಗಾರರ ಬೋಟ್ ತಂಗಲು ಅವಕಾಶ ನೀಡಲು ಒತ್ತಾಯ

Update: 2020-09-21 17:24 GMT

ಮಂಗಳೂರು,  ಸೆ.20: ಕರಾವಳಿಯಲ್ಲಿ ಭಾರೀ ವರ್ಷಧಾರೆ ಹಿನ್ನಲೆಯಲ್ಲಿ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬೋಟ್ ಗಳು  ನವ ಮಂಗಳೂರು ಬಂದರಿನಲ್ಲಿ ಆಶ್ರಯ ಪಡೆದಿದ್ದು ಇದೀಗ ಒತ್ತಾಯಪೂರ್ವಕವಾಗಿ ತೆರಳುವಂತೆ ಮಾಡಲಾಲಾಗುತ್ತಿದೆ ಎಂದು ಪರ್ಸಿನ್ ಮೀನುಗಾರ ಮುಂಖಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೀನುಗಾರರ ಸುರಕ್ಷತೆಯ ದೃಷ್ಟಿಯಿಂದ ಸದ್ಯ ಎನ್ಎಂಪಿಟಿಯಲ್ಲಿಯೇ ತಂಗಲು ಅವಕಾಶ ಮಾಡಿಕೊಡಬೇಕು ಎಂದು ಪರ್ಸಿನ್ ಮೀನುಗಾರರ ಸಂಘದ ಅಧ್ಯಕ್ಷ ಶಶಿಕುಮಾರ್ ಬೆಂಗ್ರೆ ಆಗ್ರಹಿಸಿದರು.

ರೆಡ್ ಅಲರ್ಟ್ ಮುಂಚೆ ಮಂಗಳೂರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಆಳಸಮುದ್ರ ಬೋಟ್ಗಳು ದೂರದ ಮಲ್ಪೆ, ಕಾರವಾರ, ಗೋವಾ ಗಡಿ ಭಾಗದಲ್ಲಿ ಮೀನುಗಾರಿಕೆ ನಿರತವಾಗಿದ್ದವು. ಸಮುದ್ರದಲ್ಲಿ ಹವಾಮಾನ ವೈಪರೀತ್ಯ ಉಂಟಾಗಿ ಇದೀಗ ಸೆ.24ರವರೆಗೆ ರೆಡ್ ಅಲರ್ಟ್ ಘೋಷಣೆ ಮಾಡಿ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಬೋಟ್ಗಳು ನವಮಂಗಳೂರು ಬಂದರು ಒಳಗೆ ಆಶ್ರಯ ಕೋರಿವೆ. ಆದರೆ ಇದೀಗ ದಿಢೀರ್ ಆಗಿ ಯಾವುದೇ ಕಾರಣ ನೀಡದೆ ಹೊರ ಹೋಗುವಂತೆ ಹೇಳಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಕೊರೋನ ಹರಡದಂತೆ ಸುರಕ್ಷತಾ ದೃಷ್ಟಿಯಿಂದ ಮೀನುಗಾರಿಕಾ ಬೋಟ್ನಲ್ಲಿಯೇ ಮೀನುಗಾರರು ವಾಸ್ತವ್ಯ ಇರುತ್ತಾರೆ. ಅವರಿಗೆ ಬೇಕಾದ ಊಟೋಪಚಾರದ ವ್ಯವಸ್ಥೆಯೂ ಇದೆ ಎಂದು ಹೇಳಿದ್ದಾರೆ.

''ಅಳಿವೆ ಬಾಗಿಲಿನಲ್ಲಿ ಸಮುದ್ರ ಬಿರುಸಾಗಿರುವುದರಿಂದ ಮೀನುಗಾರಿಕಾ ಬಂದರಿಗೆ ಮರಳುವುದು ಅಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಎನ್ಎಂಪಿಟಿಯಲ್ಲಿ ಆಶ್ರಯ ಪಡೆದಿದ್ದಾರೆ. ಸುಮಾರು 175ಕ್ಕೂ ಮಿಕ್ಕಿ ಅಳಸಮುದ್ರ ದೋಣಿಗಳು ಆಶ್ರಯ ಪಡೆದಿದ್ದು 1500ಕ್ಕೂ ಮಿಕ್ಕಿ ಮೀನುಗಾರರು ಇದ್ದಾರೆ. ಸೆ.24ರವರೆಗೆ ರೆಡ್ ಅಲರ್ಟ್ ಘೋಷಣೆ ಇರುವುದರಿಂದ ಸುರಕ್ಷತೆ ಅಗತ್ಯವಾಗಿದ್ದು ಜೀವ ಹಾನಿ,ಲಕ್ಷಾಂತರ ಮೌಲ್ಯದ ಬೋಟಿಗೆ ಹಾನಿಯಾಗದಂತೆ  ಇಲ್ಲೇ ಇರುವುದು ಸದ್ಯದ ಮಟ್ಟಿಗೆ ಅನಿವಾರ್ಯ.

ಮೋಹನ್ ಬೆಂಗ್ರೆ , ನಿಕಟಪೂರ್ವ ಅಧ್ಯಕ್ಷರು
ಪರ್ಸಿನ್ ಮೀನುಗಾರರ ಸಂಘ ಮಂಗಳೂರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News