ಶ್ವೇತಭವನಕ್ಕೆ ವಿಷ ಲೇಪಿತ ಪತ್ರ ರವಾನೆ ಶಂಕಿತ ಕೆನಡಿಯನ್ ಮಹಿಳೆಯ ಬಂಧನ

Update: 2020-09-21 17:32 GMT

ವಾಶಿಂಗ್ಟನ್,ಸೆ.21: ಶ್ವೇತಭವನದ ವಿಳಾಸಕ್ಕೆ ಅತ್ಯಂತ ವಿಷಪೂರಿತವಾದ ರಿಸಿನ್ ರಾಸಾಯನಿಕವನ್ನು ಲೇಪಿಸಿದ ಲಕೋಟೆಪತ್ರವನ್ನು ರವಾನಿಸಿದ್ದಳೆಂಬ ಸಂದೇಹದಲ್ಲಿ ಮಹಿಳೆಯೊಬ್ಬರನ್ನು ಅಮೆರಿಕದ ಭದ್ರತಾ ಅಧಿಕಾರಿಗಳು ರವಿವಾರ ಬಂಧಿಸಿದ್ದಾರೆ.

 ಆರೋಪಿ ಮಹಿಳೆಯನ್ನು ಅಮೆರಿಕ-ಕೆನಡ ಗಡಿಯಲ್ಲಿ ಬಂಧಿಸಲಾಗಿದೆಯೆಂದು ಅಮೆರಿಕದ ತನಿಖಾ ಸಂಸ್ಥೆ ಎಫ್‌ಬಿಐನ ಕಾರ್ಯಾಲಯವು ಹೇಳಿಕೆ ನೀಡಿದೆ. ‘‘ಸಂದೇಹಾಸ್ಪದ ಪತ್ರವೊಂದನ್ನು ಕಳುಹಿಸಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರನ್ನು ಬಂಧಿಸಲಾಗಿದೆ’’ ಎಂದು ಹೇಳಿಕೆ ತಿಳಿಸಿದೆ. ಪ್ರಕರಣದ ತನಿಖೆಯು ನಡೆಯುತ್ತಿರುವುದಾಗಿ ಅದು ಹೇಳಿದೆ.

  ಬಂಧಿತ ಮಹಿಳೆಯು ಕೆನಡಿಯನ್ ಪೌರತ್ವವನ್ನು ಹೊಂದಿದ್ದಾಳೆಂದು ಎಫ್‌ಬಿಐ ಮೂಲಗಳು ತಿಳಿಸಿವೆ. ಶ್ವೇತಭವನಕ್ಕೆ ವಿಷಪೂರಿತ ಪತ್ರವನ್ನು ಕಳುಹಿಸಿರುವ ಘಟನೆಗೆ ಸಂಬಂಧಿಸಿ ನೆರವು ನೀಡುವಂತೆ ತನಗೆ ಎಫ್‌ಬಿಐ ಮನವಿ ಮಾಡಿರುವುದಾಗಿ ರಾಯಲ್ ಕೆನಡಿಯನ್ ವೌಂಟೆಡ್ ಪೊಲೀಸ್ ಪಡೆ ತಿಳಿಸಿದೆ. ಈ ಶಂಕಾಸ್ಪದ ಪತ್ರವನ್ನು ಕೆನಡದಿಂದ ಕಳುಹಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಆರ್‌ಸಿಎಂಪಿ ಹೇಳಿಕೆಯಲ್ಲಿ ತಿಳಿಸಿದೆ. ರೆಸಿನ್ ರಾಸಾಯನಿಕವನ್ನು ಕ್ಯಾಸ್ಟರ್ ಬೀನ್ಸ್‌ನಿಂದ ಪಡೆಯಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News