ಕೊರೋನ ನಿಯಂತ್ರಣದಲ್ಲಿ ವೈಫಲ್ಯಕ್ಕೆ ಹೊಣೆ: ಝೆಕ್ ಆರೋಗ್ಯ ಸಚಿವ ರಾಜೀನಾಮೆ

Update: 2020-09-21 17:50 GMT

ಪ್ರೇಗ್,ಸೆ.21: ದೇಶದಲ್ಲಿ ಕೊರೋನ ವೈರಸ್ ಸೋಂಕಿನ ಪ್ರಕರಣಗಳಲ್ಲಿ ದಾಖಲೆ ಏರಿಕೆಯುಂಟಾಗಿರುವ ಹಿನ್ನೆಲೆಯಲ್ಲಿ ಝೆಕ್ ಗಣರಾಜ್ಯದ ಆರೋಗ್ಯ ಸಚಿವ ಆ್ಯಡಂ ವೊಜ್‌ಟೆಕ್ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ

 ತನ್ನ ಪದತ್ಯಾಗದಿಂದಾಗಿ ಸರಕಾರಕ್ಕೆ ಈ ಮಾರಕ ಸೋಂಕಿನ ವಿರುದ್ಧ ಹೋರಾಟಕ್ಕೆ ಹೊಸ ನೀತಿಯನ್ನು ರೂಪಿಸಲು ಅವಕಾಶ ದೊರೆಯಲಿದೆ ಎಂದು ಹೇಳಿದ್ದಾರೆ.

ಕೋವಿಡ್-19 ನಿಯಂತ್ರಿಸುವಲ್ಲಿ ವಿಫಲರಾಗಿರುವುದಕ್ಕಾಗಿ ರಾಜೀನಾಮೆ ನೀಡುವಂತೆ ಪ್ರತಿಪಕ್ಷಗಳು ವೊಜ್‌ಟೆಕ್ ಅವರ ಮೇಲೆ ಸತತವಾಗಿ ಒತ್ತಡ ಹೇರಿದ್ದವು. ವೊಜ್‌ಟೆಕ್ ಅವರ ಉತ್ತರಾಧಿಕಾರಿಯಾಗಿ ಯಾರನ್ನು ಆಯ್ಕೆ ಮಾಡಲಾಗುವುದೆಂಬ ಬಗ್ಗೆ ತಕ್ಷಣವೇ ಸ್ಪಷ್ಟವಾದ ಮಾಹಿತಿ ಲಭ್ಯವಾಗಿಲ್ಲ.

    ಬೇಸಿಗೆಯ ಆರಂಭದಲ್ಲಿ ಕೊರೋನ ಹಾವಳಿಯನ್ನು ನಿಯಂತ್ರಿಸಲು ಜೆಕ್ ಗಣರಾಜ್ಯವು ಉತ್ತಮ ನಿರ್ವಹಣೆಯನ್ನು ತೋರಿತ್ತಾದರೂ, ಕಳೆದ ವಾರದಿಂದ ಸೋಂಕಿನ ಪ್ರಕರಣಗಳಲ್ಲಿ ದಾಖಲೆ ಏರಿಕೆ ಕಂಡುಬಂದಿರುವುದು ಸರಕಾರಕ್ಕೆ ಆತಂಕವನ್ನುಂಟು ಮಾಡಿದೆ.

 ಕಳೆದ ಗುರುವಾರದಿಂದೀಚೆಗೆ ದೇಶದಲ್ಲಿ ಒಂದು ದಿನದಲ್ಲಿ 3 ಸಾವಿರಕ್ಕೂ ಅಧಿಕ ಹೊಸ ಸೋಂಕಿನ ಪ್ರಕರಣಗಳು ವರದಿಯಾಗುತ್ತಿರುವುದು ಆರೋಗ್ಯ ತಜ್ಞರನ್ನು ಚಿಂತೆಗೀಡು ಮಾಡಿದೆ. ಕೊರೋನ ವೈರಸ್ ಹಾವಳಿ ಆರಂಭವಾದಾಗಿನಿಂದ ಝೆಕ್ ಗಣರಾಜ್ಯದಲ್ಲಿ ಒಟ್ಟು 49,290 ಸೋಂಕಿನ ಪ್ರಕರಣಗಳು ವರದಿಯಾಗಿದ್ದು, 503 ಮಂದಿ ಸಾವನ್ನಪ್ಪಿದ್ದಾರೆಂದು ಸೋಮವಾರ ಸರಕಾರ ಪ್ರಕಟಿಸಿದ ಅಂಕಿಅಂಶಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News